ಯುವ ಪೀಳಿಗೆಗೆ ಬೋಸ್‌ರ ಹೋರಾಟ ಪರಿಚಯಿಸೋಣ: ರಂಗ ನಿರ್ದೇಶಕ ಎಂ.ಎಸ್ ಸತ್ಯು

Update: 2018-04-22 16:09 GMT

ಬೆಂಗಳೂರು, ಎ.22: ಇಂದಿನ ಯುವ ಪೀಳಿಗೆಗೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ಸ್ವಾತಂತ್ರ ಹೋರಾಟದ ಅನುಭವಗಳನ್ನು ಪರಿಚಯಿಸಬೇಕಾದ ಅಗತ್ಯವಿದೆ ಎಂದು ರಂಗ ನಿರ್ದೇಶಕ ಎಂ.ಎಸ್. ಸತ್ಯು ಅಭಿಪ್ರಾಯಪಟ್ಟರು.

ರವಿವಾರ ನಗರದ ನಯನ ಸಭಾಂಗಣದಲ್ಲಿ ಅಮರೇಶ್ವರ ವಿಜಯ ನಾಟಕ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಚನ್ನಬಸಯ್ಯಗುಬ್ಬಿ ರಚಿಸಿರುವ ‘ಭಾರತರತ್ನ ನೇತಾಜಿ ಸುಭಾಷ್‌ಚಂದ್ರ ಬೋಸ್’ ನಾಟಕದ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೋಸ್‌ರ ಎಲ್ಲ ನಿಲುವುಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಆದರೆ, ದೇಶದ ಸ್ವಾತಂತ್ರಕ್ಕಾಗಿ ಅವರಲ್ಲಿದ್ದ ತುಡಿತ ಒಪ್ಪಿಕೊಳ್ಳುತ್ತೇನೆ. ಇವತ್ತಿನ ಪೀಳಿಗೆಗೆ ಸ್ವಾತಂತ್ರ ಹೋರಾಟಗಾರರ ಚರಿತ್ರೆಯನ್ನು ತಿಳಿಸಬೇಕಿದೆ ಎಂದರು.

ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವವನ್ನು ತಿರಸ್ಕರಿಸಿದ್ದ ನೇತಾಜಿ ಕ್ರಾಂತಿಯಿಂದಲ್ಲೇ ಸ್ವಾತಂತ್ರ ಸಾಧ್ಯ ಎಂದು ನಂಬಿದ್ದರು. ಇವರ ಕ್ರಾಂತಿಕಾರಕ ಚಿಂತನೆಗಳು ಗಾಂಧಿ ಮತ್ತು ಅವರ ಹಿಂಬಾಲಕರುಗಳಿಗೆ ಅಷ್ಟಾಗಿ ಸರಿಬರದ ಕಾರಣ ಬೋಸ್ ಪಕ್ಷದಿಂದ ಕ್ರಮೇಣ ದೂರಾಗಬೇಕಾಯಿತು. ಹೀಗಾಗಿಯೇ ಭಾರತದ ಸ್ವಾತಂತ್ರ ಹೋರಾಟದ ನಾಯಕರಲ್ಲಿ ನೇತಾಜಿ ಕಳಂಕ ನಾಯಕರಾದರು ಎಂದು ಹೇಳಿದರು.

ಸಂಸ್ಕೃತ ವಿದ್ವಾಂಸ ಡಾ.ಜೆ.ಶ್ರೀನಿವಾಸಮೂರ್ತಿ ಮಾತನಾಡಿ, ಸ್ವಾತಂತ್ರಕ್ಕಾಗಿ ರೂಪುಗೊಂಡ ಚಳವಳಿಗಳಲ್ಲಿನ ವಿಚಾರದಾರೆಗಳನ್ನು ಇಂದಿನ ಯುವಕರಿಗೆ ತಿಳಿಸಬೇಕಿದೆ. ಹಿಂದಿನ ದಿನಗಳಲ್ಲಿ ಕ್ರಾಂತಿಗೀತೆಗಳು ಮೊಳಗಿದರೆ ನಮ್ಮಲ್ಲಿ ಹುಟ್ಟುತ್ತಿದ್ದ ಭಾವಾವೇಷ ಇಂದಿನ ಮಕ್ಕಳಲ್ಲಿ ಕಾಣಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಲೇಖಕರು ನೇತಾಜಿ ಅವರ ಅಣ್ಣನ ಮಗ ಶಶಿಚಂದ್ರ ಬೋಸ್ ಸಂಪರ್ಕಿಸಿ ನಾಟಕಕ್ಕೆ ಬೇಕಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ನಾಟಕ ಅಜ್ಜ ಮೊಮ್ಮಕ್ಕಳಿಗೆ ಕತೆ ಹೇಳಿದ ರೀತಿ ಇದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಕವಿತಾಕೃಷ್ಣ, ಲೇಖಕ ಚನ್ನಬಸಯ್ಯಗಬ್ಬಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News