ಪತ್ರಕತೆರ್ಯರ ವಿರುದ್ಧ ಕೀಳುಮಟ್ಟದ ಹೇಳಿಕೆ: ಬಿಜೆಪಿ ಮುಖಂಡ ಶೇಖರ್ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2018-04-22 16:15 GMT

ಬೆಂಗಳೂರು, ಎ.22: ಮಹಿಳಾ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳುನಾಡು ಬಿಜೆಪಿ ಮುಖಂಡ ಎಸ್.ವಿ.ಶೇಖರ್‌ರನ್ನು ಈ ಕೂಡಲೆ ಬಂಧಿಸಬೇಕೇಂದು ಒತ್ತಾಯಿಸಿ ಕರ್ನಾಟಕ ಪತ್ರಕರ್ತೆಯರ ಸಂಘ ಧರಣಿ ನಡೆಸಿತು.

ರವಿವಾರ ನಗರದ ಪುರಭವನದ ಮುಂಭಾಗ ಬಿಜೆಪಿ ಮುಖಂಡ ಎಸ್.ವಿ.ಶೇಖರ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ನಡೆಸಿದ ಪತ್ರಕರ್ತೆಯರು, ಬಿಜೆಪಿ ನಾಯಕರಿಗೆ ಮಹಿಳೆಯರ ಬಗ್ಗೆ ಎಂತಹ ಮನಸ್ಥಿತಿ ಹೊಂದಿದ್ದಾರೆ ಎಂಬುದನ್ನು ಇಂತಹ ಹೇಳಿಕೆಯಿಂದ ಸಾಭೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ, ಪತ್ರಕರ್ತೆಯರ ವಿರುದ್ಧ ಬಿಜೆಪಿ ಮುಖಂಡ ಶೇಖರ ನೀಡಿರುವ ಹೇಳಿಕೆ ದೇಶಕ್ಕೆ ಮಾಡಿರುವ ಅಪಮಾನ. ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕಾಗಿದೆ ಎಂದು ತಿಳಿಸಿದರು.

ಮಾಧ್ಯಮಗಳ ಮಾಲಕರು ಬಿಜೆಪಿ ಮುಖಂಡ ಶೇಖರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಮಾನನಷ್ಟ ಮೊಕದಮೆ ಹಾಕಬೇಕು. ಈತನ ಹೇಳಿಕೆಗೆ ಬಿಜೆಪಿ ನೈತಿಕ ಹೊಣೆಹೊತ್ತು ಕ್ಷಮೆಯಾಚಿಸಬೇಕು ಹಾಗೂ ಆತನನ್ನು ಪಕ್ಷದಿಂದ ಉಚ್ಚಾಟಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.

ಪತ್ರಕರ್ತೆ ಮಾಲತಿ ಭಟ್ ಮಾತನಾಡಿ, ಇವತ್ತಿನ ದಿನಗಳಲ್ಲಿ ಪತ್ರಕರ್ತರು ಕಷ್ಟಕರವಾದ ವೃತ್ತಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳಾ ಪತ್ರಕರ್ತರ ವೃತ್ತಿ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶೇಖರ್ ಪತ್ರಕರ್ತೆಯರ ಆತ್ಮಸ್ಥೈರ್ಯವನ್ನೆ ಕುಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಇವರನ್ನು ಈ ಕೂಡಲೆ ಬಂಧಿಸುವ ಮೂಲಕ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತೆ ಜ್ಯೋತಿ ಇರ್ವತ್ತೂರು ಮಾತನಾಡಿ, ಪತ್ರಕರ್ತೆಯರು ಅತ್ಯಂತ ಶ್ರಮವಹಿಸಿ ಉನ್ನತ ಹಂತಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪತ್ರಕರ್ತರ ಹಾದಿ ಹೂವಿನ ಹಾಸಿಗೆಯಲ್ಲ. ಪ್ರತಿ ಹೆಜ್ಜೆಯು ಸವಾಲನ್ನು ಬೇಡುತ್ತಿರುತ್ತದೆ. ಇದರ ನಡುವೆ ರಾಜಕಾರಣಿಗಳ ಕೀಳುಮಟ್ಟದ ಮಾತುಗಳನ್ನು ಕೇಳಬೇಕಾದ ಅನಿವಾರ್ಯ ಬಂದಿರುವುದು ದುರಾದೃಷ್ಟಕರವೆಂದು ವಿಷಾಧಿಸಿದರು.

ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಪತ್ರಕರ್ತೆಯರ ವಿರುದ್ಧ ಬಿಜೆಪಿ ಮುಖಂಡ ಶೇಖರ ನೀಡಿರುವ ಹೇಳಿಕೆಯನ್ನು ಪ್ರತಿಯೊಬ್ಬರು ಖಂಡಿಸಬೇಕು. ಇವರ ಹೇಳಿಕೆಗಳನ್ನು ಖಂಡಿಸದಿದ್ದರೆ ಕಾಡ್ಗಿಚ್ಚಿನಂತೆ ಹರಡುವ ಅಪಾಯವಿದೆ. ಹೀಗಾಗಿ ಇದಕ್ಕೆ ನಾವು ಅವಕಾಶ ಕೊಡಬಾರದು. ಪತ್ರಕರ್ತೆಯರ ಹೋರಾಟಕ್ಕೆ ಬೆಂಗಳೂರು ಪ್ರೆಸ್‌ಕ್ಲಬ್ ಬೆಂಬಲಿಸಿ ಅವರ ಜೊತೆ ಇರಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತೆ ವಿಜಯಾ, ಸಂಧ್ಯಾರಾಣಿ, ಮಂಜುಳಾ ಹುಲಿಕುಂಟೆ, ಕಿರಣಾ, ಶಾಲಿನಿ ರವಿ, ಪತ್ರಕರ್ತ ನವೀನ್ ಸೂರಿಂಜೆ ಸೇರಿದಂತೆ ಹಲವು ಪತ್ರಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News