ರೆಡ್ಡಿಯ ಸಂಪತ್ತಿಗೆ ಮನಸೋತು ಬಿಜೆಪಿ ನೈತಿಕತೆ ಕಳೆದುಕೊಂಡಿದೆ: ಟಪಾಲ್ ಗಣೇಶ್

Update: 2018-04-22 16:50 GMT

ಬಳ್ಳಾರಿ, ಎ.22: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ನಾವು ಭ್ರಷ್ಟರನ್ನು ದೂರ ಮಾಡಿ ಮತ ಕೇಳುತ್ತೇವೆ ಎನ್ನುವ ಮೂಲಕ ಬಿಜೆಪಿ ಡಬಲ್ ಗೇಮ್ ಆಡುತ್ತಿದೆ ಎಂದು ಟಪಾಲ್ ಗಣೇಶ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ರವಿವಾರ ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಕಡೆ ಅಕ್ರಮ ಗಣಿಗಾರಿಕೆಯ ರೂವಾರಿ ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ ಪಕ್ಷದ ಅಧ್ಯಕ್ಷ ಅಮಿತ್ ಶಾ. ಇನ್ನೊಂದು ಕಡೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನಾರ್ದನ ರೆಡ್ಡಿ ಜೊತೆ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಾರೆ. ಇದಕ್ಕೆ ಏನನ್ನಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಭ್ರಷ್ಟಾಚಾರದ ಮುಖಂಡರುಗಳಿಂದ ಕೂಡಿದ ಇನ್ನೊಂದು ಮುಖ ಎಂದ ಗಣೇಶ್, ರೆಡ್ಡಿಯ ಸಂಪನ್ಮೂಲಕ್ಕೆ ಮನಸೋತು ಬಿಜೆಪಿ ತನ್ನ ನೈತಿಕತೆಯನ್ನು ಕಳೆದುಕೊಂಡಿದೆ. ರೆಡ್ಡಿ ಬಣವನ್ನು ದೂರ ಇಡದೆ, ಭ್ರಷ್ಟಾಚಾರ ದೂರ ಮಾಡುವುದು ಸಾಧ್ಯವೇ ಎಂದು ಟಪಾಲ್ ಪ್ರಶ್ನಿಸಿದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಸ್ಪಷ್ಟನೆ ಕೇಳುವೆ ಎಂದರು.

ಭೂತದ ಬಾಯಲ್ಲಿ ಭಗವದ್ಗೀತೆ: ಬಿಜೆಪಿ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡುತ್ತ, ಸಿದ್ದರಾಮಯ್ಯ ಅವರನ್ನು ಸಿದ್ದ ರಾವಣ ಎಂದು ಶನಿವಾರ ಜನಾರ್ದನ ರೆಡ್ಡಿ ಹೇಳಿದ್ದಾರೆ. ಸಿದ್ದ ರಾವಣನನ್ನು ಈ ಚುನಾವಣೆಯಲ್ಲಿ ಸಂಹಾರ ಮಾಡುವುದಾಗಿ ಹೇಳಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News