ದೂರವಾದ ಗರ್ಲ್‌ಫ್ರೆಂಡ್, ಕೈಬಿಟ್ಟ ಪತ್ನಿ; ಲವ್ ಗುರು ಈಗ ಏಕಾಂಗಿ !

Update: 2018-04-23 04:09 GMT
ಮತುಕ್‌ನಾಥ್ ಚೌಧರಿ

ಪಾಟ್ನಾ, ಎ. 23: ವಿವಾದಾಸ್ಪದ ನಡವಳಿಕೆ ಮೂಲಕ ಬಿಹಾರದಲ್ಲಿ 'ಲವ್ ಗುರು' ಎಂದೇ ಕುಖ್ಯಾತನಾಗಿದ್ದ ಮತುಕ್‌ನಾಥ್ ಚೌಧರಿ (64) ಈಗ ಏಕಾಂಗಿ.

ದಶಕದ ಹಿಂದೆ ತನ್ನ ಪ್ರಿಯತಮೆ ಎಂದು ಪರಿಚಯಿಸಿಕೊಂಡಿದ್ದ ಜ್ಯೂಲಿ ಕುಮಾರಿ ಇದೀಗ ಆಧ್ಯಾತ್ಮಿಕ ಕಾರಣದಿಂದ ಈತನಿಂದ ದೂರವಾಗಿದ್ದಾಳೆ. ಈಕೆಗಾಗಿ ಲವ್‌ಗುರು ಈ ಹಿಂದೆಯೇ ಪತ್ನಿಯನ್ನು ತ್ಯಜಿಸಿದ್ದ.

"ಪರಿಸ್ಥಿತಿ ಯಾವಾಗ ಬದಲಾಗುತ್ತದೆ ಎನ್ನುವುದು ಯಾರಿಗೂ ತಿಳಿಯದು. ನಮಗೂ ಅದೇ ಆಗಿದೆ. ದಶಕದ ಕಾಲ ನಾವು ಜತೆಗಿದ್ದೆವು. ಬಳಿಕ ಜ್ಯೂಲಿ ಬಾಹ್ಯ ಜಗತ್ತಿನ ವ್ಯವಹಾರಗಳಿಂದ ವಿಮುಖಳಾಗತೊಡಗಿದಳು" ಎಂದು 2004ರಲ್ಲಿ ಆಕೆಯನ್ನು ಮೊದಲು ಭೇಟಿ ಮಾಡಿದ್ದ ಲವ್‌ಗುರು ಹೇಳಿದ್ದಾನೆ.

ಪಾಟ್ನಾದ ಬಿಎನ್ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕನಾಗಿದ್ದ ಈತ ಎರಡು ವರ್ಷದ ಬಳಿಕ ವಿದ್ಯಾರ್ಥಿನಿ ಜತೆಗೆ ಅಫೇರ್ ಹೊಂದಿ ಸುದ್ದಿಯಾಗಿದ್ದ. ವಿವಿ ಆತನನ್ನು ಅಮಾನತು ಮಾಡಿ ಬಳಿಕ ವಜಾ ಮಾಡಿತ್ತು. 21 ವರ್ಷದ ಯುವತಿಯ ಜತೆ ಈತ ತಂಗಿದ್ದ ಮನೆಗೆ ಪತ್ನಿ, ಟಿವಿ ಪತ್ರಕರ್ತರ ಜತೆಗೆ ಆಗಮಿಸಿ ತಗಾದೆ ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಅಧಿಕ ಅಂಕ ನೀಡುವ ಆಸೆ ತೋರಿಸಿ, ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಾನೆ ಎಂದು ಪತ್ನಿ ಆಪಾದಿಸಿದ್ದರು. ಆತನಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಪತ್ನಿ ವಿರುದ್ಧ ಮತ್ತು ತನ್ನ ವಜಾ ರದ್ದುಮಾಡುವ ಸಂಬಂಧ ವಿವಿ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಆರಂಭಿಸಿದ್ದ.

ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿ, ತ್ಯಜಿಸಿದ ಪತ್ನಿಗೆ ತನ್ನ ವೇತನದ ಅಥವಾ ಪಿಂಚಣಿಯ ಮೂರನೇ ಒಂದು ಭಾಗವನ್ನು ನೀಡುವುದಾಗಿ ತಿಳಿಸಿದ್ದ. ಇದೀಗ ಒಬ್ಬಂಟಿಯಾಗಿರುವ ಈತನ ಜತೆ, ಸ್ಟಾಕ್‌ಹೋಂನಲ್ಲಿರುವ ಈತನ ಮಗ ಕೂಡಾ ಮಾತನಾಡುತ್ತಿಲ್ಲ.

ನಾಲ್ಕು ವರ್ಷದ ಹಿಂದೆ ಆಧ್ಯಾತ್ಮದಲ್ಲಿ ಆಸಕ್ತಿ ಹುಟ್ಟಿದ ಜ್ಯೂಲಿ, ಪುದುಚೇರಿ, ಹೃಷಿಕೇಶ ಮತ್ತು ಪುಣೆ ಓಶೋ ಆಶ್ರಮದಲ್ಲಿ ಸಮಯ ಕಳೆಯುತ್ತಿದ್ದಾರೆ. "ಪಾಟ್ನಾಗೆ ಅಗಮಿಸಿದಾಗ ನನ್ನ ಜತೆ ಸಮಯ ಕಳೆಯುತ್ತಾಳೆ. ಆಕೆ ಪೂರ್ಣಾವಧಿಯಾಗಿ ಆಧ್ಯಾತ್ಮದ ಹಸಿವು ಇಂಗಿಸಿಕೊಳ್ಳಲು ಅನುಕೂಲವಾಗುವಂತೆ ನಾವು ನಿರ್ಧಾರಕ್ಕೆ ಬಂದಿದ್ದೇವೆ" ಎಂದು ಹೇಳಿದ್ದಾನೆ.

"ವಯಸ್ಸಿನ ಅಂತರ ಸಮಸ್ಯೆಯೇ ಅಲ್ಲ. ಮಾನಸಿಕವಾಗಿ ನಮ್ಮಿಬ್ಬರದು ಇಂದಿಗೂ ಒಂದೇ ವಯಸ್ಸು" ಎನ್ನುವುದು ಆತನ ವಿಶ್ಲೇಷಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News