ಸಿಜೆಐ ವಿರುದ್ಧದ ಪದಚ್ಯುತಿ ನೋಟಿಸ್ ತಿರಸ್ಕೃತಗೊಂಡಿರುವುದು ಅಚ್ಚರಿ ತಂದಿಲ್ಲ: ಕಾಂಗ್ರೆಸ್

Update: 2018-04-23 07:36 GMT

ಹೊಸದಿಲ್ಲಿ, ಎ.23: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ಸಹಿತ ಇತರ ವಿಪಕ್ಷಗಳು ಪದಚ್ಯುತಿ ನಿಲುವಳಿ ಮಂಡಿಸಲು ನಿರ್ಧರಿಸಿ ಈ ಬಗ್ಗೆ ನೀಡಿದ್ದ ನೋಟಿಸನ್ನು ರಾಜ್ಯಸಭಾ ಅಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿರುವುದು ತಮಗೆ ಆಶ್ಚರ್ಯವೇನೂ ತಂದಿಲ್ಲ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸಿಂಘ್ವಿ "ನಿರೀಕ್ಷಿಸಿದಂತೆ ನಾಯ್ಡು ಅವರು ಮಹಾಭಿಯೋಗ ನಿಲುವಳಿಯನ್ನು ತಿರಸ್ಕರಿಸಿದ್ದಾರೆ. ಆದರೆ ಅನಿರೀಕ್ಷಿತವೆಂಬಂತೆ ಅವರು  ಪ್ರವಾಸದಿಂದ ಹಿಂದಿರುಗಿದ ಒಂದೇ ದಿನದಲ್ಲಿ ಹಾಗೆ ಮಾಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ತಮ್ಮ ಹುದ್ದೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಕೆಲಸಗಳನ್ನು ನಿಲ್ಲಿಸಬೇಕೆಂಬ ಆಗ್ರಹ ಬರುವ ಮೊದಲೇ ಅವುಗಳನ್ನು ತಡೆಯುವ ಉದ್ದೇಶ ಇದರ ಹಿಂದಿರಲಿಲ್ಲವೆಂದು ಅಂದುಕೊಳ್ಳಬೇಕು'' ಎಂದು ಬರೆದಿದ್ದಾರೆ.

ಪದಚ್ಯುತಿ ನಿಲುವಳಿ ನೋಟಿಸ್ ನಲ್ಲಿ 'ಸಾಕಷ್ಟು ಹುರುಳಿಲ್ಲ' ಎಂಬ ಕಾರಣ ನೀಡಿ ನಾಯ್ಡು ಅದನ್ನು ತಿರಸ್ಕರಿಸಿದ ಕೆಲವೇ ನಿಮಿಷಗಳಲ್ಲಿ ಸಿಂಘ್ವಿ ಅವರ ಹೇಳಿಕೆ ಬಂದಿದೆ. ಒಟ್ಟು 64 ರಾಜ್ಯಸಭಾ ಸದಸ್ಯರು ಈ ನೋಟಿಸಿಗೆ ಸಹಿ ಹಾಕಿದ್ದರು. ಆರಂಭದಲ್ಲಿ ಒಟ್ಟು 71 ಮಂದಿ ಸಹಿ ಹಾಕಿದ್ದರೂ ಅವರಲ್ಲಿ ಏಳು ಮಂದಿ ನಿವೃತ್ತಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News