ಇದು ಪ್ರಜಾಸತ್ತೆಯನ್ನು ರಕ್ಷಿಸುವ ದನಿಗಳ ಮತ್ತು ತಿರಸ್ಕರಿಸುವ ಶಕ್ತಿಗಳ ನಡುವಿನ ಹೋರಾಟ: ಕಾಂಗ್ರೆಸ್

Update: 2018-04-23 09:51 GMT

ಹೊಸದಿಲ್ಲಿ, ಎ.23: ಸಿಜೆಐ ದೀಪಕ್ ಮಿಶ್ರಾ ವಿರುದ್ಧದ ಪದಚ್ಯುತಿ ನೋಟಿಸ್ ತಿರಸ್ಕರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕ್ರಮವನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದು, ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

“ಅವರ ನಿರ್ಧಾರ ಸರಿಯಾಗಿಯೇ ಇದೆ. ಈ ನಿರ್ಧಾರಕ್ಕಾಗಿ ಅವರು 2 ದಿನಗಳನ್ನು ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಪದಚ್ಯುತಿ ನೋಟಿಸ್ ಶೂನ್ಯವಾಗಿದ್ದು, ಮೊದಲೇ ಎಸೆಯಬೇಕಾಗಿತ್ತು. ಇದನ್ನು ಮಾಡುವ ಮೂಲಕ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಂಡಿದೆ” ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಉಪರಾಷ್ಟ್ರಪತಿಯವರ ತುರ್ತು ಕ್ರಮದ ಬಗ್ಗೆ ಶಿವಸೇನೆ ನಾಯಕರೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಎರಡೂ ಪಕ್ಷಗಳೂ ಕೆಟ್ಟ ರಾಜಕೀಯ ಮಾಡುತ್ತಿದೆ. ಪದಚ್ಯುತಿ ನೋಟಿಸನ್ನು ತಿರಸ್ಕರಿಸಿರುವುದೂ ರಾಜಕೀಯವೇ. ಉಪರಾಷ್ಟ್ರಪತಿಯವರು ಕಾಯಬಹುದಿತ್ತು. ಈ ವಿಷಯದಲ್ಲಿ ತುರ್ತಿನ ಅಗತ್ಯವಿರಲಿಲ್ಲ” ಎಂದು ಶಿವಸೇನೆಯ ಅರವಿಂದ್ ಸಾವಂತ್ ಹೇಳಿದ್ದಾರೆ.

“ಇದು ನಿಜಕ್ಕೂ ಪ್ರಮುಖ ವಿಷಯವಾಗಿದೆ. ನೋಟಿಸ್ ತಿರಸ್ಕೃತಗೊಳಿಸಲು ಕಾರಣ ಏನೆಂದು ನಮಗೆ ಗೊತ್ತಿಲ್ಲ. ಕಾಂಗ್ರೆಸ್ ಹಾಗು ಇತರ ರಾಜಕೀಯ ಪಕ್ಷಗಳು ಕಾನೂನು ಪರಿಣಿತರೊಂದಿಗೆ ಮಾತುಕತೆ ನಡೆಸಲಿದೆ ಹಾಗು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಕಾಂಗ್ರೆಸ್ ನಾಯಕ ಪಿ.ಎಲ್. ಪುನಿಯಾ ಹೇಳಿದ್ದಾರೆ.

“ಪದಚ್ಯುತಿಯ ಸಾಂವಿಧಾನಿಕ ಪ್ರಕ್ರಿಯೆಯು 50 ಸಂಸದರು ಸಹಿ ಹಾಕುವುದರೊಂದಿಗೆ ಆರಂಭಗೊಂಡಿದೆ. ರಾಜ್ಯಸಭಾ ಸಭಾಪತಿ ಅದರ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ, ಅವರಿಗೆ ಪದಚ್ಯುತಿ ನಿಲುವಳಿಯ ಅರ್ಹತೆಗಳ ಬಗ್ಗೆ ನಿರ್ಧರಿಸಲು ಅಧಿಕಾರವಿಲ್ಲ. ಇದು 'ಪ್ರಜಾಸತ್ತೆಯನ್ನು ತಿರಸ್ಕರಿಸುವ ಶಕ್ತಿಗಳು ಹಾಗೂ ಪ್ರಜಾಸತ್ತೆಯನ್ನು ರಕ್ಷಿಸುವ ದನಿಗಳ ನಡುವಿನ ನಿಜವಾದ ಹೋರಾಟವಾಗಿದೆ' ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News