ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟ: ವೀರಪ್ಪಮೊಯ್ಲಿ

Update: 2018-04-23 13:11 GMT

ಬೆಂಗಳೂರು, ಎ.23: ಪ್ರಧಾನಿ ನರೇಂದ್ರಮೋದಿ ಲೋಕಸಭಾ ಚುನಾವಣೆ ವೇಳೆ ದೇಶದ ಜನತೆಗೆ ನೀಡಿದ್ದ ಒಂದು ಭರವಸೆಯನ್ನು ಈಡೇರಿಸದೆ ವಚನ ಭ್ರಷ್ಟರಾಗಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪಮೊಯ್ಲಿ ಆರೋಪಿಸಿದರು.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಶೇ.100 ರಷ್ಟು ಈಡೇರಿಸುವ ಮೂಲಕ ‘ನುಡಿದಂತೆ ನಡೆದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಎಸ್ಸಿ-ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಿ, ಅದನ್ನು ಕಟ್ಟುನಿಟ್ಟಾಗಿ ಖರ್ಚು ಮಾಡುವ ಕ್ರಾಂತಿಕಾರಕ ಮಸೂದೆಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಎಸ್ಸಿ-ಎಸ್ಟಿಗಳ ಕಲ್ಯಾಣಕ್ಕಾಗಿ ಐದು ವರ್ಷಗಳಲ್ಲಿ ನಮ್ಮ ಸರಕಾರ 80 ಸಾವಿರ ಕೋಟಿ ರೂ.ಖರ್ಚು ಮಾಡಿದೆ. ಆದರೆ, ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಖರ್ಚು ಮಾಡಿದ್ದು ಕೇವಲ 26 ಸಾವಿರ ಕೋಟಿ ರೂ.ಮಾತ್ರ. ನೀರಾವರಿ ಯೋಜನೆಗಳಿಗೆ ಬಿಜೆಪಿ 16 ಸಾವಿರ ಖರ್ಚು ಮಾಡಿದರೆ, ನಾವು ಸುಮಾರು 75 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ ಎಂದು ಮೊಯ್ಲಿ ತಿಳಿಸಿದರು.

ರಾಜ್ಯದ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಒಂದೇ ಕಂತಿನಲ್ಲಿ 218 ಕ್ಷೇತ್ರಗಳಿಗೆ ನಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಯಿತು. ಬಿಜೆಪಿಯವರದ್ದು ಈಗಾಗಲೆ ಮೂರು ಪಟ್ಟಿ ಬಿಡುಗಡೆಯಾಗಿದ್ದು, ನಾಲ್ಕನೆಯ ಸಿದ್ಧತೆಯಲ್ಲಿದ್ದಾರೆ. ಜೆಡಿಎಸ್‌ನವರು ಅಭ್ಯರ್ಥಿಗಳಿಗಾಗಿ ಬಲೆ ಬೀಸಿಕೊಂಡು ಕಾಯುತ್ತಿದ್ದಾರೆ ಎಂದು ಮೊಯ್ಲಿ ವ್ಯಂಗ್ಯವಾಡಿದರು.

ಈ ಬಾರಿಯ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆಯಲಿದೆ. ಜೆಡಿಎಸ್ ಸೈದ್ಧಾಂತಿವಕಾಗಿ ಶಿಥಿಲ ಪರಿಸ್ಥಿತಿಯಲ್ಲಿದೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ. ಪಂಚಾಯತ್ ಚುನಾವಣೆಯಲ್ಲಿ ಪರಾಭವ ಗೊಂಡಿರುವ ವ್ಯಕ್ತಿಯನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ರಾಜ್ಯದ ಗೌರವ, ನೆಲ, ಜಲ, ಭಾಷೆ ವಿಚಾರವಾಗಿ ಸ್ಪಷ್ಟ ನಿಲುವು ಹೊಂದಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ್ದು ಯುಪಿಎ ಸರಕಾರ. ಪ್ರತ್ಯೇಕ ನಾಡಧ್ವಜ ರಚನೆ ಮಾಡುವ ಪ್ರಕ್ರಿಯೆ ಮುಗಿಸಿದ್ದೇವೆ. ಮಹಾದಾಯಿ ವಿವಾದ ಬಗೆಹರಿಸುವ ವಿಚಾರದಲ್ಲಿ ಬಿಜೆಪಿಯವರು ಪ್ರಧಾನಿ ಮುಂದೆ ಮಾತನ್ನೆ ಆಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇಂದಿರಾ ಕ್ಯಾಂಟೀನ್, ಟೆಂಡರ್ ಶ್ಯೂರ್ ರಸ್ತೆಗಳು, ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಿದ್ದೇವೆ. ಈ ಎಲ್ಲ ವಿಚಾರಗಳು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಮೊಯ್ಲಿ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ 154 ವಿಧಾನಸಭಾ ಕ್ಷೇತ್ರಗಳಿವೆ. ರೈತರ ಸಾಲಮನ್ನಾ ಮಾಡಿದ್ದೇವೆ. ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಿದ್ದೇವೆ. ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಗ್ರಾಮೀಣ ಭಾಗದಲ್ಲಿ ನಮ್ಮ ಪಕ್ಷವು ಪ್ರಬಲವಾಗಿದ್ದು, 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರಮೋದಿಯ ಮತೀಯ ಪ್ರಜ್ಞೆ ಇಲ್ಲಿ ತಳವೂರಲು ಅವಕಾಶವಿಲ್ಲ. ಬಾದಾಮಿ ಚಾಲುಕ್ಯರ ರಾಜಧಾನಿ, ಹರ್ಷವರ್ಧನನ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು ಬಾದಾಮಿಯ ಪುಣ್ಯ ಭೂಮಿ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

ಸಿಎಂ ವಿರುದ್ಧ ಸ್ಪರ್ಧಿಸಲು ಬಿಎಸ್‌ವೈಗೆ ಧೈರ್ಯವಿಲ್ಲ
ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಧೈರ್ಯ ಯಡಿಯೂರಪ್ಪಗಿಲ್ಲ. ಅವರ ಆರೋಗ್ಯದ ಬಗ್ಗೆ ನನಗೆ ಗೊತ್ತಿದೆ. ಸ್ವಲ್ಪ ರಕ್ತದೊತ್ತಡ ಹೆಚ್ಚಾದರೂ ಸಮಸ್ಯೆಯಾಗುತ್ತದೆ. ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಸ್ಪರ್ಧಿಸಲು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಿಂದೇಟು ಹಾಕಿದ್ದಾರೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದದ್ದು ಆಕಸ್ಮಿಕ. ಇನ್ನು ಮುಂದೆ ಬಿಜೆಪಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಉತ್ತರ ಭಾರತದ ಹರ್ಷವರ್ಧನ ದಕ್ಷಿಣದ ಬಾದಾಮಿ ಮೇಲೆ ದಾಳಿ ಮಾಡಿದಾಗ, ಅದನ್ನು ತಡೆದದ್ದು ಬಾದಾಮಿಯ ಎರಡನೆ ಪುಲಿಕೇಶಿ. ಅದೇ ರೀತಿ, ಬಿಜೆಪಿಯ ನಾಗಾಲೋಟಕ್ಕೆ ಸಿದ್ದರಾಮಯ್ಯ ಬಾದಾಮಿಯಲ್ಲಿ ತಡೆಯೊಡ್ಡಲಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ನಾಳೆ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
-ಡಾ.ಎಂ.ವೀರಪ್ಪಮೊಯ್ಲಿ, ಕೇಂದ್ರದ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News