ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಅರಿವಿಲ್ಲದಿರುವುದು ದುರದೃಷ್ಟಕರ: ಕೇಂದ್ರ ಸಚಿವ ಅನಂತಕುಮಾರ್

Update: 2018-04-23 13:39 GMT

ಬೆಂಗಳೂರು, ಎ. 23: ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಸಂವಿಧಾನದ ಬಗ್ಗೆ ಕಾಂಗ್ರೆಸ್‌ಗೆ ಅರಿವು ಇಲ್ಲದಿರುವುದು ದುರದೃಷ್ಟಕರ ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿ ಗೌಡ, ಪವನ್, ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮೇಶ್, ರಾಮಣ್ಣ ಸೇರಿದಂತೆ ಇನ್ನಿತರ ಮುಖಂಡರು ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದರು.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ಬೇಡಿಕೆಯನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದು, ಇದನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಂವಿಧಾನದ ಬಗ್ಗೆ ತನ್ನ ತಿಳುವಳಿಕೆಯನ್ನು ಪ್ರದರ್ಶಿಸಿದೆ ಎಂದರು.

ಉಪರಾಷ್ಟ್ರಪತಿಯವರು ವಾಗ್ದಂಡನೆ ಬೇಡಿಕೆ ಕುರಿತು ಪ್ರಜ್ಞಾಪೂರ್ವಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಹತಾಶೆಗೊಂಡಿರುವ ಕಾಂಗ್ರೆಸ್ ಅವಕಾಶಕ್ಕೆ ತಕ್ಕಂತೆ ಮಾತನಾಡುತ್ತಾ, ಎಲ್ಲವನ್ನು ಪ್ರಶ್ನಿಸುತ್ತದೆ. ಕಾಂಗ್ರೆಸ್‌ಗೆ ಮರೆವು ರೋಗ ಆವರಿಸಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ಗೆ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಯಾವುದೇ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಎಂ ನೆಲೆ ಗಡಗಡ: 30 ವರ್ಷಗಳಿಂದ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದನ್ನು ನೋಡಿದರೆ, ಅವರ ನೆಲೆ ಅಲುಗಾಡುತ್ತಿರುವುದು ಸ್ಪಷ್ಟ. ಚುನಾವಣೆಯಲ್ಲಿ ಸೋಲು ಕಾಣುತ್ತಿರುವ ಸಿದ್ದರಾಮಯ್ಯ ತವರಿನಲ್ಲೆ ಜನರನ್ನು ಎದುರಿಸಲಿಕ್ಕಾಗದೆ, ಬಾದಾಮಿಗೆ ಫಲಾಯನ ಮಾಡುತಿದ್ದು, ಅಲ್ಲಿಯೂ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಟೀಕಿಸಿದರು.

ಪ್ರತ್ಯೇಕ ಪ್ರಣಾಳಿಕೆ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ರೂಪಿಸುತ್ತಿದ್ದು, 3-4 ದಿನಗಳೊಳಗಾಗಿ ಪ್ರಣಾಳಿಕೆ ಬಿಡುಗಡೆ ಮಾಡುವುದು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದೂ ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ. ಉದ್ಯಾನನಗರ, ಐಟಿ-ಬಿಟಿ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರು ಈಗ ಅಪರಾಧ ನಗರವಾಗಿ ಪರಿವರ್ತನೆಯಾಗಿದೆ. ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಮಿತಿ ಮೀರಿದೆ ಎಂದು ಲೇವಡಿ ಮಾಡಿದರು.

ನನ್ನ ಗುರು ಅಲ್ಲ: ಎಂ.ಶ್ರೀನಿವಾಸ್ ನನ್ನ ಗುರು ಅಲ್ಲ, ಬಿಜೆಪಿಯೇ ನನ್ನ ಗುರು. ಅವರು 9 ಬಾರಿ ಆ ಪಕ್ಷ ಈ ಪಕ್ಷ ಎಂದು ಪಕ್ಷಾಂತರ ಮಾಡಿದ್ದಾರೆ. ಬಿಜೆಪಿಗೆ ಅವರು ಪಕ್ಷಾಂತರ ಮಾಡಿಯೇ ಬಂದದ್ದು, ಹಾಗಾಗಿ ನನ್ನ ಗುರುವೇ ಅಲ್ಲ, ಪದ್ಮನಾಭ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ನಾನೇ ಅಲ್ಲ, ಯಾರೇ ಕಣಕ್ಕಿಳಿದರೂ ಅವರ ಗೆಲುವು ಖಚಿತ ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News