ಪುಸ್ತಕಗಳ ಮೇಲಿನ ಜಿಎಸ್‌ಟಿ ತೆಗೆಯಿರಿ: ಡಾ.ಸಿದ್ದಲಿಂಗಯ್ಯ

Update: 2018-04-23 14:57 GMT

ಬೆಂಗಳೂರು, ಎ.23: ಪುಸ್ತಕಗಳ ಮೇಲೆ ಹಾಕಿರುವ ಜಿಎಸ್‌ಟಿ ಅನ್ನು ತೆಗೆದು ಹಾಕಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಒತ್ತಾಯ ಮಾಡಿದರು.

ಸೋಮವಾರ ನಗರದ ಸೆಂಟ್ರಲ್ ಕಾಲೇಜು ಆವರಣದ ಕೇಂದ್ರ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಪ್ರಕಾಶಕರ ಸಂಘ ವತಿಯಿಂದ ಆಯೋಜಿಸಿದ್ದ, ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೇಖಕರಿಗೆ ಕೊಡುವ ರಿಯಾಯ್ತಿಯಲ್ಲಿ ಶೇ.12 ರಷ್ಟು ಜಿಎಸ್‌ಟಿ ಕೊಡುವುದು ಕಷ್ಟವಾಗುತ್ತಿದೆ. ಇದರಿಂದ ಲೇಖಕರು ಮತ್ತು ಪ್ರಕಾಶಕರು ಬದುಕುವುದು ಹೇಗೆ? ಇದರಿಂದ ಬಹಳ ಅನ್ಯಾಯವಾಗಿದ್ದು, ಕೂಡಲೇ ಇದನ್ನು ತೆಗೆದುಹಾಕಬೇಕು. ಅಲ್ಲದೆ, ಈಗ ಸಂಗೀತ ಪುಸ್ತಕಗಳ ಮೇಲೆ ಜಿಎಸ್‌ಟಿ ತೆರಿಗೆ ಹಾಕಿದವರು ಸಂಗೀತ ವಿರೋಧಿಗಳಾಗಿದ್ದಾರೆ ಎನ್ನುವಂತಾಗಿದೆ ಎಂದರು.

ರಾಜ್ಯ ಸರಕಾರ ಅಂಗೀಕರಿಸಿರುವ ಪುಸ್ತಕ ನೀತಿಯನ್ನು ಜಾರಿಗೊಳಿಸಲು ಕನ್ನಡ ಪುಸ್ತಕ ಪ್ರಾಧಿಕಾರ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದ ಅವರು, ಪುಸ್ತಕ ನೀತಿ ಜಾರಿಗೆ ತರುವುದರಿಂದ ಲೇಖಕರು ಮತ್ತು ಪ್ರಕಾಶಕರು ಬದುಕುತ್ತಾರೆ ಎಂದು ಸಿದ್ದಲಿಂಗಯ್ಯ ನುಡಿದರು.

ಪತ್ರಿಕೆಗಳ ಮುದ್ರಣ ಕಾಗದಕ್ಕೆ ಸಬ್ಸಿಡಿ ನೀಡುವಂತೆ, ಪುಸ್ತಕ ಮುದ್ರಣಗಾರರಿಗೂ ಪ್ರಕಾಶಕರಿಗೂ ಸಬ್ಸಿಡಿ ನೀಡಬೇಕು. ಅದರಿಂದ ಅವರಿಗೆ ಸಾಕಷ್ಟು ಸಹಾಯವಾಗಲಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದವರು ಮುದ್ರಣಕಾರರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಗ್ರಂಥಾಲಯಕ್ಕೆ 300 ಕೋಟಿ ರೂ. ತೆರಿಗೆಯ ಹಣವನ್ನು ಬಿಬಿಎಂಪಿ ಬಿಡುಗಡೆ ಮಾಡಬೇಕು. ಅದರಲ್ಲಿ ಕನಿಷ್ಟ 150 ಕೋಟಿ ರೂ.ಗಳನ್ನಾದರೂ ನೀಡಿದರೆ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಸಹಾಯವಾಗುತ್ತದೆ. ಅಲ್ಲದೇ ಗ್ರಂಥಾಲಯಕ್ಕೆ ಸುಮಾರು 500 ಪುಸ್ತಕಗಳನ್ನಾದರೂ ಖರೀದಿಸಬಹುದು ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಓದುಗರು ಮತ್ತು ಕೇಳುಗರು ಕಡಿಮೆಯಾಗುತ್ತಿದ್ದಾರೆ. ಈ ಹಿಂದೆ ಕಥೆ-ಕಾದಂಬರಿಗಳನ್ನು ಗೃಹಿಣಿಯರೆ ಹೆಚ್ಚು ಓದುತ್ತಿದ್ದರು. ಆದರೆ, ಈಗ ಧಾರಾವಾಹಿ ಹಿಂದೆ ಬಿದ್ದು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹೀಗಾಗಿ ಓದುವ ವರ್ಗ ಸಂಪೂರ್ಣ ಬದಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಜಗತ್ತಿನಾದ್ಯಂತ ಪುಸ್ತಕ ಮಳಿಗೆಗಳು ಮುಚ್ಚುತ್ತಾ ಬರುತ್ತಿವೆ. ಇದು ದುರಂತದ ಸಂಗತಿ. ನಮ್ಮಲ್ಲಿಯೂ ಕೂಡಾ ದೊಡ್ಡ ದೊಡ್ಡ ಪ್ರಕಾಶನ ಮಳಿಗೆಗಳು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಸಾಹಿತ್ಯ ಅಕಾಡೆಮಿ ದಕ್ಷಿಣ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ್, ಐಬಿಎಚ್ ಪ್ರಕಾಶನದ ಸಂಜಯ ಅಡಿಗ, ಭಾರತಿ ಪ್ರಕಾಶನದ ಶ್ರೀನಿವಾಸ, ನವಕರ್ನಾಟಕ ಪ್ರಕಾಶನದ ರಮೇಶ ಉಡುಪ, ಅಭಿನವ ಪ್ರಕಾಶನದ ನ.ರವಿಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News