‘ಪದ್ಮಾವತ್’ ಚಲನಚಿತ್ರದ ದೃಶ್ಯ ಅಳಿಸುವಂತೆ ಕೋರಿ ಸ್ವಾಮಿ ಅಗ್ನಿವೇಶ್ ಸಲ್ಲಿಸಿದ್ದ ಮನವಿ ತಿರಸ್ಕೃತ

Update: 2018-04-23 15:10 GMT

ಹೊಸದಿಲ್ಲಿ, ಎ. 23: ಸತಿಸಹಗಮನವನ್ನ್ನು ವೈಭವೀಕರಿಸಿರುವ ‘ಪದ್ಮಾವತ್’ ಚಲನಚಿತ್ರದ ದೃಶ್ಯವನ್ನು ಅಳಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಸಾಮಾಜಿಕ ಪಿಡುಗಾದ ಸತಿಸಹಗಮನವನ್ನು ವೈಭವೀಕರಿಸಿರುವುದಕ್ಕೆ ಚಲನಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಕೋರಿ ಸ್ವಾಮಿ ಅಗ್ನಿವೇಶ್ ಸಲ್ಲಿಸಿದ್ದ ಮನವಿಯನ್ನು ಕೂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿದೆ. ‘‘ಸೆನ್ಸಾರ್ ಮಂಡಳಿ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದ ಬಳಿಕ ದೃಶ್ಯಗಳನ್ನು ಅಳಿಸುವಂತೆ ನಿರ್ದೇಶಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.

‘ಪದ್ಮಾವತ್’ ಬಿಡುಗಡೆ ವಿರುದ್ಧ ವಿವಿಧ ನೆಲೆಯಲ್ಲಿ ಸಲ್ಲಿಸಲಾಗಿದ್ದ ಹಲವು ದೂರುಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಜನವರಿ 18ರಂದು ಚಲನಚಿತ್ರ ಮೇಲಿನ ನಿಷೇಧವನ್ನು ತಳ್ಳಿ ಹಾಕಿತ್ತು. ಇದರಿಂದ ಜನವರಿ 25ರಂದು ‘ಪದ್ಮಾವತ್’ ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News