ಸಲ್ಮಾನ್ ವಿರುದ್ಧದ ತನಿಖೆಗೆ ಸುಪ್ರೀಂ ತಡೆ

Update: 2018-04-23 15:17 GMT

ಹೊಸದಿಲ್ಲಿ, ಎ. 23: ‘ಟೈಗರ್ ಜಿಂದಾ ಹೈ’ ಚಲನಚಿತ್ರದ ಪ್ರಚಾರದ ಸಂದರ್ಭ ವಾಲ್ಮೀಕಿ ಸಮುದಾಯದ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಆರೋಪದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ತನಿಖೆಗೆ ಹಾಗೂ ಕ್ರಿಮಿನಲ್ ಕಲಾಪದ ಆರಂಭಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ವಿಧಿಸಿದೆ.

ಸಲ್ಮಾನ್ ಖಾನ್ ಪರ ಹಿರಿಯ ವಕೀಲ ಎನ್.ಕೆ. ಕೌಲ್ ಅವರ ಪ್ರತಿಪಾದನೆ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡಿರುವ ಪೀಠ, ಕಲಾಪಕ್ಕೆ ತಡೆ ನೀಡಿದೆ. ನಟನ ವಿರುದ್ಧ ದಿಲ್ಲಿ, ಗುಜರಾತ್, ರಾಜಸ್ಥಾನ ಹಾಗೂ ಮುಂಬೈಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ಹೇಳಿದರು.

ಸಲ್ಮಾನ್ ಖಾನ್ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿವರ ನೀಡುವಂತೆ ಪೀಠ ಕೌಲ್ ಅವರಿಗೆ ನಿರ್ದೇಶಿಸಿತು ಹಾಗೂ ಈ ಪ್ರಕರಣಗಳ ವಿಚಾರಣೆ ತಡೆ ಆದೇಶ ನೀಡಿತು. ಬಾಲಿವುಡ್ ಚಲನಚಿತ್ರ ‘ಟೈಗರ್ ಜಿಂದಾ ಹೈ’ ಯ ಪ್ರಚಾರದ ಸಂದರ್ಭ ಸಲ್ಮಾನ್ ಖಾನ್ ವಾಲ್ಮೀಕಿ ಸಮುದಾಯದ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News