ಬಿಎಸ್ ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ಸಂತೋಷ್, ಅನಂತ್ ಕುಮಾರ್ ಕಾರಣವೇ?

Update: 2018-04-23 15:25 GMT

ಬೆಂಗಳೂರು, ಎ. 23: ಕೊನೆಯ ಕ್ಷಣದಲ್ಲಿ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದ ಪ್ರಬಲ ಅಕಾಂಕ್ಷಿಯಾಗಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಲು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಕಾರಣ ಎಂಬ ಆರೋಪ ಕೇಳಿಬಂದಿದೆ.

ಈ ಮಧ್ಯೆ ಮೈಸೂರಿನ ಹನೂರು ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದ ಮೇಲ್ಮನೆ ಸದಸ್ಯ ವಿ.ಸೋಮಣ್ಣನವರಿಗೆ ಆ ಕ್ಷೇತ್ರದ ಟಿಕೆಟ್ ತಪ್ಪಿಸಿದ್ದು, ಸಂತೋಷ್ ಮೂಲಕ ವಿಜಯೇಂದ್ರಗೆ ಟಿಕೆಟ್ ತಪ್ಪಿಸಲು ಚಿತಾವಣೆ ನಡೆಸಿದ್ದಾರೆಂದು ಹೇಳಲಾಗಿದೆ.

ಅದರಂತೆ, ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕುವಂತೆ ಪಕ್ಷದ ವರಿಷ್ಠರಿಗೆ ಸಂತೋಷ್ ಮನವಿ ಮಾಡಿದ್ದಾರೆ. ಅಲ್ಲದೆ, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸೋಲಲಿದೆ ಎಂಬ ಸಂಘಪರಿವಾರದ ಆಂತರಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 11:30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ನೀಡಿದ್ದು, ಇದರಿಂದ ಬಿಜೆಪಿಯಲ್ಲಿ ಬಣ ರಾಜಕೀಯ ಆರಂಭವಾಗಿದೆ. ಹೀಗಾಗಿ ವರುಣಾ ಮತ್ತು ಮೈಸೂರು ಭಾಗದಲ್ಲಿ ಅನಂತಕುಮಾರ್, ಬಿ.ಎಲ್. ಸಂತೋಷ್ ಹಾಗೂ ಆರೆಸೆಸ್ಸ್ ಮುಖಂಡರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡ ಪಕ್ಷಕ್ಕೆ ರಾಜೀನಾಮೆಗೆ ಮುಂದಾಗಿರುವ ಸ್ಥಳೀಯ ನಾಯಕರು, ಬಿಜೆಪಿಯ ಈ ಗದ್ದಲ, ಗೊಂದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಭವಾಗಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಅಡ್ಡ ಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಬಿಜೆಪಿ ಬಲ್ಲ ಮೂಲಗಳ ಪ್ರಕಾರ ವರುಣಾ ಕ್ಷೇತ್ರದ ಟಿಕೆಟ್ ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣ ಸಿದ್ದಯ್ಯ, ಲಂಡನ್ ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಅಥವಾ ಆರೆಸೆಸ್ಸ್ ಸಾಮಾನ್ಯ ಕಾರ್ಯಕರ್ತ ಸದಾನಂದ ಅವರಿಗೆ ದೊರೆಯುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News