ದೃಶ್ಯ ಮಾಧ್ಯಮದಿಂದ ಪುಸ್ತಕ ಸಂಸ್ಕೃತಿ ಮರೆ: ಡಾ.ಚಂದ್ರಶೇಖರ ಕಂಬಾರ ವಿಷಾದ

Update: 2018-04-23 16:53 GMT

ಬೆಂಗಳೂರು, ಎ.23: ದೃಶ್ಯ ಮಾಧ್ಯಮದ ಪ್ರಭಾವದಿಂದ ಪುಸ್ತಕ ಓದಿ, ಅದರಲ್ಲಿರುವ ವಿಷಯ ಸತ್ವಗಳನ್ನು ಹಿಡಿದಿಟ್ಟುಕೊಳ್ಳುವ ಸಂಸ್ಕೃತಿ ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ವಿಷಾದ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ನಗರ ಕೇಂದ್ರ ಗ್ರಂಥಾಲಯದ ಪಶ್ಚಿಮ ವಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏನನ್ನು ನೋಡುತ್ತೇವೋ ಅದನ್ನು ನಂಬುತ್ತೇವೆ. ಏನನ್ನು ಕೇಳುತ್ತೇವೋ ಅದನ್ನು ನಂಬುವುದಿಲ್ಲ. ಹೀಗಾಗಿ, ನೋಡಿ ಓದುವ ಪುಸ್ತಕಗಳಿಗೆ ಮಹತ್ವ ನೀಡಬೇಕು ಎಂದು ಹೇಳಿದರು.

ಅಂಬೇಡ್ಕರ್, ನೆಹರೂ ಅವರು ಪುಸ್ತಕವನ್ನು ಹಿಡಿದು ಭಾವಚಿತ್ರ ತೆಗೆಸಿಕೊಳ್ಳುತ್ತಿದ್ದರು. ಅಂದು ಪುಸ್ತಕ ಓದುವುದು ಹಾಗೂ ಜೊತೆಗಿರಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಓದುಗರ ಸಂಖ್ಯೆ ಕ್ಷೀಣಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ನಾಸ್ತಿಕನಾದ ನನಗೆ ಕಬ್ಬನ್ ಉದ್ಯಾನದಲ್ಲಿನ ಕೇಂದ್ರ ಗ್ರಂಥಾಲಯವೇ ದೇವರ ಮನೆ, ಅಲ್ಲಿನ ಪುಸ್ತಕಗಳೇ ನನ್ನ ಪಾಲಿಗೆ ಸರಸ್ವತಿ. ಶ್ರೀರಾಂಪುರದ ಸ್ಲಮ್‌ನಲ್ಲಿ ಬೆಳೆದ ನಾನು, ಬಾಲ್ಯದಲ್ಲಿ ಶಾಲೆ ಬಿಟ್ಟು ಬೆಂಗಳೂರು ಅಲೆಯುತ್ತಿದ್ದೆ. ಒಮ್ಮೆ ಕುತೂಹಲಕ್ಕೆ ಗ್ರಂಥಾಲಯ ಪ್ರವೇಶಿಸಿ ಬಸವರಾಜ ಕಟ್ಟಿಮನಿ ಅವರ ‘ಸ್ವಾತಂತ್ರದೆಡೆಗೆ’ ಕಾದಂಬರಿ ಓದಿದೆ. ಇದು ನನ್ನ ಜೀವನದ ಕಥೆಯ ಹಾಗಿದೆಯಲ್ಲ ಎನಿಸಿತು. ಬಳಿಕ ಕಟ್ಟಿಮನಿ ಅವರ ಎಲ್ಲ ಕಾದಂಬರಿಗಳನ್ನು ಓದಿದೆ ಎಂದು ತಿಳಿಸಿದರು.

ಕುವೆಂಪು ಅವರ ಪ್ರೇಮ ಕವಿತೆ, ಕ್ರಾಂತಿಕಾರಿ ಕವನಗಳು ಬಹುವಾಗಿ ಆಕರ್ಷಿಸಿದ್ದವು. ಮುಂದೆ ಕುವೆಂಪು ಸಾಹಿತ್ಯ ಓದಿಕೊಂಡೆ. ಬಳಿಕ ಬೇಂದ್ರೆ, ಅಡಿಗ, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಬೀಚಿ ಅವರ ಪುಸ್ತಕಗಳನ್ನು ಪ್ರತಿದಿನ 4 ಗಂಟೆಯಂತೆ ನಾಲ್ಕು ವರ್ಷ ಕಬ್ಬನ್ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ತಪಸ್ಸಿನಂತೆ ಓದಿದೆ. ಇಂದು ನನಗೆ ಸಿಕ್ಕಿರುವ ಸ್ಥಾನಮಾನಗಳೆಲ್ಲವು ಗ್ರಂಥಾಲಯದಲ್ಲಿನ ಪುಸ್ತಕಗಳು ನೀಡಿದ್ದು ಎಂದು ಸ್ಮರಿಸಿದರು.

ಒಂದು ಉತ್ತಮ ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಜೀವ ಸಹ ಕೊಡಬಲ್ಲದೆಂಬುದಕ್ಕೆ ನಾನೇ ಉದಾಹರಣೆ. ‘ಇಕ್ಕರ್ಲ, ಒದಿರ್ಲ, ಎಬ್ಬರ್ಲ’ ಅಂಥಾ ಬಂಡಾಯದ ಬರವಣಿಗೆಯನ್ನು ಕನ್ನಡಿಗರು ‘ಹೊಸ ಗುಣದ ಬರಹಗಾರ ತನ್ನ ನೋವಿಗೆ ಅಕ್ಷರದ ರೂಪಕೊಟ್ಟಿದ್ದಾನೆ’ ಎಂದು ಅಭಿಮಾನದಿಂದ ಸ್ವೀಕರಿಸಿದರು ಎಂದು ನೆನೆದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಿ.ಎನ್. ಮುನಿಕೃಷ್ಣ, ಶೂದ್ರ ಶ್ರೀನಿವಾಸ್, ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ಪಿ.ವಿ. ಕೊಣ್ಣೂರ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್, ವಿಶ್ರಾಂತ ನಿರ್ದೇಶಕರಾದ ಕೆ.ಜಿ. ವೆಂಕಟೇಶ್, ಡಾ.ಪಿ.ವೈ. ರಾಜೇಂದ್ರಕುಮಾರ್, ಟಿ. ಮಲ್ಲೇಶಪ್ಪಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News