ಕೆಎಸ್‌ಒಯು 2018-19ನೆ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಹೈಕೋರ್ಟ್ ಮೌಖಿಕ ನಿರ್ದೇಶನ

Update: 2018-04-23 17:12 GMT

ಬೆಂಗಳೂರು, ಎ.23: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ(ಕೆಎಸ್‌ಒಯು) 2018-19ನೆ ಸಾಲಿನ ಕೋರ್ಸ್‌ಗಳಿಗೆ ಆದಷ್ಟು ಬೇಗ ಮಾನ್ಯತೆ ನೀಡುವಂತೆ ಯುಜಿಸಿಗೆ ಹೈಕೋರ್ಟ್ ಮೌಖಿಕ ನಿರ್ದೇಶನ ನೀಡಿದೆ.

ಕೆಎಸ್‌ಒಯುನ 2017-18ನೆ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಯುಜಿಸಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠದಲ್ಲಿ ಸೋಮವಾರ ನಡೆಯಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಡಿ.ಎನ್. ನಂಜುಂಡರೆಡ್ಡಿ, ಏಕಸದಸ್ಯ ಪೀಠದ ಆದೇಶದಂತೆ ಯುಜಿಸಿ 2017-18ನೆ ಸಾಲಿನ ಕೋರ್ಸ್‌ಗಳಿಗೆ ಇನ್ನೂ ಮಾನ್ಯತೆ ನೀಡಿಲ್ಲ. ಇದೀಗ 2018-19ನೆ ಸಾಲಿಗೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ಪರಿಶೀಲಿಸುವಾಗ ಆಯೋಗವು ಹಿಂದಿನ ವರ್ಷಗಳ ಬೆಳವಣಿಗೆಗಳನ್ನು ಪರಿಗಣಿಸುವ ಆತಂಕವಿದೆ ಎಂದು ಹೇಳಿದರು.

ಯುಜಿಸಿ ಪರ ಹಾಜರಿದ್ದ ವಕೀಲ ಕ್ಯಾಪ್ಟನ್ ಅರವಿಂದ್ ಶರ್ಮಾ ವಾದ ಮಂಡಿಸಿ, 2018-19ನೆ ಶೈಕ್ಷಣಿಕ ವರ್ಷಕ್ಕೆ ಮಾನ್ಯತೆ ಕೋರಿ ಕೆಎಸ್‌ಒಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಅದನ್ನು ಮೆರಿಟ್ ಮೇಲೆ ಪರಿಶೀಲಿಸಲಾಗುವುದು. ಈ ವೇಳೆ ವಿವಿಗೆ ಈ ಹಿಂದೆ ಮಾನ್ಯತೆ ನೀಡಿರಲಿಲ್ಲ ಎಂಬ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಆ ಬಗ್ಗೆ ವಿ.ವಿ ಆತಂಕ ಪಡುವ ಅಗತ್ಯವಿಲ್ಲ ಎಂದು ನ್ಯಾಯಪೀಠದ ಮುಂದೆ ವಾಗ್ದಾನ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, 2018-19ನೆ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ಕೋರಿ ಕೆಎಸ್‌ಒಯು ಸಲ್ಲಿಸಿರುವ ಅರ್ಜಿಯನ್ನು ಯಜಿಸಿಯು ಕಾನೂನು ಪ್ರಕಾರ ಪರಿಶೀಲಿಸಿ ಶೀಘ್ರ ನಿರ್ಧಾರ ಕೈಗೊಳ್ಳುತ್ತದೆ ಎಂದು ನ್ಯಾಯಾಲಯ ನೀರಿಕ್ಷಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿರುವ ಈ ಮೇಲ್ಮನವಿಯ ಸಂಬಂಧ ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಮೇಲ್ಮನವಿ ಇತ್ಯರ್ಥವಾಗುವವರೆಗೆ ಏಕಸದಸ್ಯಪೀಠದ ಆದೇಶವನ್ನು ಅಮಾನತ್ತಿನಲ್ಲಿರಿಸುವುದಾಗಿ ತಿಳಿಸಿ ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News