ಎ.24 ರಂದು ಪ್ರಧಾನಿ ಮೋದಿ ವಿರುದ್ಧ ವೈದ್ಯರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Update: 2018-04-23 17:20 GMT

ಬೆಂಗಳೂರು, ಎ.23: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿದೇಶದಲ್ಲಿ ಭಾರತೀಯ ವೈದ್ಯರ ಬಗ್ಗೆ ಅವಹೇಳನಕರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಎ.24 ರಂದು ರಾಜ್ಯದ ಎಲ್ಲಾ ವೈದ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ಸೋಮವಾರ ನಗರದ ಚಾಮರಾಜಪೇಟೆಯ ಐಎಂಎ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಚ್.ಎನ್. ರವೀಂದ್ರ, ವೈದ್ಯರು ಕಪ್ಪುಪಟ್ಟಿ ಧರಿಸಿ ದಿನನಿತ್ಯದಂತೆ ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಲಂಡನ್‌ನಲ್ಲಿ ಏರ್ಪಡಿಸಿದ್ದ ‘ಸಬ್ ಕೆ ಸಾಥ್ ಭಾರತ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಾನಾಡುವ ವೇಳೆ ಭಾರತೀಯ ವೈದ್ಯರು ಸಿಂಗಾಪುರಕ್ಕೆ ಏಕೆ ಹೋಗುತ್ತಾರೆ, ಅಲ್ಲಿ ಹೋಗಿ ಏನು ಮಾಡುತ್ತಾರೆ ಎಂದ ಅವರು, ವೈದ್ಯರು ಕಮಿಷನ್‌ಗಾಗಿ ತೆರಳುತ್ತಾರೆ ಎಂದು ಅವಹೇಳನಕರವಾಗಿ ನುಡಿದಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಲಂಡನ್‌ಗೆ ಏಕೆ ಹೋಗುತ್ತಾರೆ ಎಂದು ಜನರಿಗೆ ಉತ್ತರ ನೀಡಬೇಕು ಎಂದ ಅವರು, ಸ್ವಹಿತಾಸಕ್ತಿಗಾಗಿ ದೇಶ ಬಿಟ್ಟು ಹೋದ ಅನಿವಾಸಿ ಭಾರತೀಯರ ಮುಂದೆ ಭಾರತೀಯ ವೈದ್ಯರನ್ನು ಅಪಮಾನ ಮಾಡಿದ್ದಾರೆ. ದೇಶಬಿಟ್ಟು ಹೊರದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ದೇಶಕ್ಕೆ ವಾಪಸ್ಸು ತರಲು ಮೊದಲು ಪ್ರಯತ್ನಿಸಿ ಎಂದರು.

ವೈದ್ಯರನ್ನು ದೂರುವ ಬದಲು ಬೆಲೆ ನಿಯಂತ್ರಿಸಲು ಮುಂದಾಗಿ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News