ತಂತ್ರಜ್ಞಾನ ದುರ್ಬಳಕೆ ನಿಯಂತ್ರಿಸಿ: ಪುಣೆ ರಕ್ಷಣಾ ವಿ.ವಿ ಮಾಜಿ ಕುಲಪತಿ ಪ್ರೊ.ಪಟ್ನಾಯಕ್

Update: 2018-04-23 17:35 GMT

ಬೆಂಗಳೂರು, ಎ.23: ತಂತ್ರಜ್ಙಾನದ ದುರ್ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಮ್ಮ ತಂತ್ರಜ್ಞರು ಹೊಸ ಮಾರ್ಗಗಳನ್ನು ಆವಿಷ್ಕರಿಸಬೇಕೆಂದು ಪುಣೆಯ ರಕ್ಷಣಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಎಲ್.ಎಂ. ಪಟ್ನಾಯಕ್ ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ಹೊಸ ಸಂಶೋಧನೆ, ಆವಿಷ್ಕಾರಗಳು ಮುಖ್ಯವಾಗಿವೆ. ಆದರೆ, ಕೆಲವು ದುಷ್ಕರ್ಮಿಗಳು ತಂತ್ರಜ್ಞಾನ ಬಳಸಿ ಅಪರಾಧ ಚಟುವಟಿಕೆಯಲ್ಲಿ ತೊಡಗುತ್ತಾರೆ. ಅದನ್ನು ತಡೆಯಲು ಹೊಸ ಮಾರ್ಗ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಸಾಮಾನ್ಯ ಜನರ ಜೀವನವನ್ನು ಸುಧಾರಿಸುವಂತಿರಬೇಕು. ಸಮಾಜದ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕವಾಗಿ ಸಂಶೋಧನೆಗಳು ನಡೆಯಬೇಕು. ಜೊತೆಗೆ ಹೊಸ ಆವಿಷ್ಕಾರಗಳು ಪರಿಸರದ ಮೇಲೆ ಮಾಡಬಹುದಾದ ದುಷ್ಪರಿಣಾಮಗಳನ್ನು ನಿಯಂತ್ರಿಸುವತ್ತ ಹೆಚ್ಚು ಒತ್ತು ನೀಡಬೇಕೆಂದು ಅವರು ತಿಳಿಸಿದರು.

ನಿಟ್ಟೆ ಮೀನಾಕ್ಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್ ಮಾತನಾಡಿ, ಜೀವನದಲ್ಲಿ ತಂದೆ-ತಾಯಂದಿರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ಅವರನ್ನು ಸದಾ ಗೌರವಿಸಬೇಕು. ಅವರ ಆಶಯಗಳನ್ನು ಈಡೇರಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ, ಬಿಇ ಪದವಿ ಪೂರೈಸಿದ 1 ಸಾವಿರ ವಿದ್ಯಾರ್ಥಿಗಳು, ಎಂ.ಟೆಕ್, ಎಂಬಿಎ ಹಾಗೂ ಎಂಸಿಎ ಸೇರಿ ವಿವಿಧ ವಿಭಾಗದ ಸ್ನಾತಕೋತ್ತರ ಪದವಿ ಪೂರೈಸಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ಮೀನಾಕ್ಷಿ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊ. ರಂಗನಾಥ ಶೆಟ್ಟಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಸುಧಾರಾವ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News