ಸಿಎಂ ಕುರಿತು ಟೀಕೆ ಬಗ್ಗೆ ಎಚ್ಚರಿಕೆ ಇರಲಿ: ಕುರುಬರ ಜಾಗೃತಿ ಸಮಿತಿ

Update: 2018-04-23 17:41 GMT

ಬೆಂಗಳೂರು, ಎ.23: ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರ ಕುರಿತು ಟೀಕೆ ಮಾಡುವ ವೇಳೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕರ್ನಾಟಕ ಕುರುಬರ ಜಾಗೃತಿ ಸಮಿತಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಮಹದೇವ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವರುಣಾದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಓಡಿ ಹೋಗಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ಅವರು ಯಾರ ಆಸ್ತಿ ಕಸಿದುಕೊಂಡು ಓಡಿ ಹೋಗಿದ್ದಾರೆ. ಯಾರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಕಳೆದ 40 ವರ್ಷಗಳಿಂದ ಸಕ್ರಿಯವಾಗಿ ರಾಜಕೀಯದಲ್ಲಿ ಬೆಳೆದು ಬಂದಿರುವ ಸಿದ್ದರಾಮಯ್ಯನವರ ವರ್ಚಸ್ಸೇ ಕಾಂಗ್ರೆಸ್ ಯಶಸ್ಸು. ಇದನ್ನು ಕೆಲವರು ತಿಳಿದುಕೊಂಡು ಮಾತನಾಡಬೇಕು. ಸಿದ್ದರಾಮಯ್ಯನವರು ಬಾದಾಮಿಯಲ್ಲಿಯೂ ಸ್ಪರ್ಧಿಸುತ್ತಿರುವ ಬಗ್ಗೆ ಅನಗತ್ಯವಾಗಿ ಟೀಕೆ ಮಾಡಲಾಗುತ್ತಿದೆ. ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಅವಕಾಶವಿದೆ. ಆದರೆ, ಬಿಜೆಪಿ ನಾಯಕರು ಅನಗತ್ಯ ವಿವಾದವನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಂಸದ ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕೆ ಮಾಡುವ ಮೊದಲು ನಿಮ್ಮ ರಾಜಕೀಯ ಸ್ಥಾನಮಾನದ ಅರಿವು ಇದ್ದರೆ ಒಳ್ಳೆಯದು. ಅವರ ರಾಜಕೀಯ ವರ್ಚಸ್ಸು ತಿಳಿದ ಹೈಕಮಾಂಡ್ ಅವರೇ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇನ್ನು ಮುಂದೆ ಅವರನ್ನು ಅನಗತ್ಯವಾಗಿ ಟೀಕೆ ಮಾಡದಿರಿ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಆರ್.ಜಿ.ಶಂಕರರಾಮೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಶ್ರೀನಿವಾಸಮೂರ್ತಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ಪಿ.ಕಷ್ಣಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News