ಹೆಚ್ಚುತ್ತಿರುವ ಪರಮಾಣು ಶಸ್ತ್ರಗಳ ಬಳಕೆಯ ಅಪಾಯ: ವಿಶ್ವಸಂಸ್ಥೆ

Update: 2018-04-23 18:24 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಎ. 23: ಪರಮಾಣು ಅಸ್ತ್ರಗಳು ಅಗತ್ಯ ಎಂಬ ವಾದವನ್ನು ವಿಶ್ವಸಂಸ್ಥೆಯ ನಿಶ್ಶಸ್ತ್ರ ವ್ಯವಹಾರಗಳ ಪ್ರತಿನಿಧಿ ಇಝುಮು ನಕಮಿಟ್ಸು ಸೋಮವಾರ ತಳ್ಳಿಹಾಕಿದ್ದಾರೆ ಹಾಗೂ ಇಂತಹ ಅಸ್ತ್ರಗಳ ಬಳಕೆಯ ಅಪಾಯ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

‘‘ಉದ್ದೇಶಪೂರ್ವಕವಾಗಿಯೋ, ಅಲ್ಲವೋ ಪರಮಾಣು ಅಸ್ತ್ರಗಳ ಬಳಕೆಯ ಬೆದರಿಕೆ ಹೆಚ್ಚುತ್ತಿದೆ’’ ಎಂದು ಪರಮಾಣು ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ದ ಪೂರ್ವಭಾವಿ ಸಮೀಕ್ಷಾ ಸಭೆಯಲ್ಲಿ ಮಾತನಾಡಿದ ಅವರು ಹೇಳಿದರು.

ಈ ಹಂತದಲ್ಲಿ ನಿಶ್ಶಸ್ತ್ರೀಕರಣ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ವಿರಳವಾಗಿದೆ ಎಂದು ಅತಿ ಹೆಚ್ಚು ಪರಮಾಣು ಶಸ್ತ್ರಗಳ ಸಂಗ್ರಹ ಹೊಂದಿರುವ ದೇಶಗಳ ಪೈಕಿ ಒಂದಾಗಿರುವ ಅಮೆರಿಕ ಹೇಳಿದೆ.

ಅರ್ಧ ಶತಮಾನದ ಹಿಂದೆ ಶೀತಲ ಸಮರ ಉತ್ತುಂಗದಲ್ಲಿದ್ದಾಗ, ಪರಮಾಣು ಅಸ್ತ್ರಗಳು ಹರಡುವುದನ್ನು ತಪ್ಪಿಸಲು ಪರಮಾಣು ಪ್ರಸರಣ ನಿಷೇಧ ಒಪ್ಪಂದವನ್ನು ಜಾರಿಗೆ ತರಲಾಗಿತ್ತು. ತಮ್ಮಲ್ಲಿರುವ ಪರಮಾಣು ಶಸ್ತ್ರಗಳನ್ನು ಕಡಿಮೆಗೊಳಿಸುವ ಹೊಣೆಯನ್ನು ಒಪ್ಪಂದವು ಪರಮಾಣು ಶಕ್ತ ರಾಷ್ಟ್ರಗಳಿಗೇ ನೀಡಿತ್ತು.

ಜಿನೇವ ಸಭೆಯಲ್ಲಿ ಮಾತನಾಡಿದ ನಕಮಿಟ್ಸು, ಪರಮಾಣು ಪ್ರಸರಣ ನಿಷೇಧ ಒಪ್ಪಂದ ರೂಪುಗೊಳ್ಳಲು ಯಾವ ಪರಿಸ್ಥಿತಿ ಕಾರಣವಾಯಿತೋ ಅದೇ ಪರಿಸ್ಥಿತಿ ಈಗಲೂ ನೆಲೆಸಿದೆ ಎಂದು ಎಚ್ಚರಿಸಿದರು.

ಪರಮಾಣು ಪ್ರಸರಣ ನಿಷೇಧ ಒಪ್ಪಂದವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಸಮಗ್ರ ಮರುಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಮುಂದಿನ ಸಮಗ್ರ ಪರಿಶೀಲನೆ 2020ರಲ್ಲಿ ನಡೆಯಲಿದೆ.

ತನ್ನ ದೀರ್ಘ ವ್ಯಾಪ್ತಿಯ ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಕ್ಕೆ ತಡೆ ಹೇರುವುದಾಗಿ ಉತ್ತರ ಕೊರಿಯ ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಸಭೆಯ ನಡೆಯುತ್ತಿದೆ. ಉತ್ತರ ಕೊರಿಯವು 15 ವರ್ಷಗಳ ಹಿಂದೆ ಪ್ರಸರಣ ನಿಷೇಧ ಒಪ್ಪಂದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News