ನವಜಾತ ಶಿಶುವಿನ ಹತ್ಯೆ : ಮಹಿಳೆಯ ಬಂಧನ

Update: 2018-04-23 18:30 GMT

ಥಾಣೆ, ಎ.23: ತನ್ನ ನವಜಾತ ಹೆಣ್ಣುಮಗುವನ್ನು ಹತ್ಯೆ ಮಾಡಿದ ಆರೋಪದಲ್ಲಿ 27ರ ಹರೆಯದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಣೆಯ ಸಮೀಪದ ಉಂಬಾರ್ಡೆ ಎಂಬ ಗ್ರಾಮದ ನಿವಾಸಿಯಾಗಿರುವ ವೈಶಾಲಿ ಪ್ರಧಾನ್ ಈ ಕೃತ್ಯ ಎಸಗಿದ ಆರೋಪಿ. ಈಕೆ ಒಂದು ವಾರದ ಹಿಂದೆ ಜನಿಸಿದ ತನ್ನ ಹೆಣ್ಣುಮಗುವಿನ ಕುತ್ತಿಗೆಯನ್ನು ತನ್ನ ಕೈಯ ಉಗುರಿನಿಂದ ಸೀಳಿ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

   ಬಡ ಕುಟುಂಬದ ಮಹಿಳೆಗೆ ಈಗಾಗಲೇ ಐದು ಮತ್ತು ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಕೆಯ ಪತಿ ವಿಪರೀತ ಮದ್ಯವ್ಯಸನಿಯಾಗಿದ್ದ ಹಾಗೂ ಸಂಸಾರ ನಿರ್ವಹಣೆಗೆ ಗಮನ ನೀಡುತ್ತಿರಲಿಲ್ಲ. ಮಗುವನ್ನು ಹತ್ಯೆ ಮಾಡಿದ ಬಳಿಕ ಮಹಿಳೆ, ಥಾಣೆಯ ಸರಕಾರಿ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದು, ಮಗು ಅಸ್ವಸ್ಥವಾಗಿದ್ದು ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದಾಳೆ. ಆಕೆಯ ವರ್ತನೆಯ ಬಗ್ಗೆ ಸಂಶಯಗೊಂಡ ವೈದ್ಯರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ಸಂದರ್ಭ ಮಗುವನ್ನು ತಾನೇ ಹತ್ಯೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News