ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಿದ್ದರಾಮಯ್ಯ ಸ್ಪರ್ಧೆಯಿಂದ ಉತ್ತರ

Update: 2018-04-24 04:50 GMT

ಒಬ್ಬ ಅಭ್ಯರ್ಥಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಹಲವು ಬಾರಿ ಚರ್ಚೆಗೊಳಗಾಗಿವೆ. ಎರಡು ಕ್ಷೇತ್ರಗಳನ್ನು ಜೊತೆಯಾಗಿ ಪ್ರತಿನಿಧಿಸಲಾಗುವುದಿಲ್ಲ ಎನ್ನುವುದು ಸ್ಪರ್ಧಿಸುವ ಅಭ್ಯರ್ಥಿಗೂ ಗೊತ್ತಿದೆ. ಹಾಗೆಯೇ ಮತ ಹಾಕುವ ಮತದಾರನಿಗೂ ತಿಳಿದಿದೆ. ಅಭ್ಯರ್ಥಿ ಜನಪ್ರಿಯನಾಗಿದ್ದರೆ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಲಿ ಎಂದು ಮತದಾರರು ಪ್ರೀತಿಯಿಂದ ಮತ ಹಾಕುತ್ತಾರೆ. ಆದರೆ ಅಭ್ಯರ್ಥಿ ಒಂದು ಕ್ಷೇತ್ರವನ್ನು ತ್ಯಜಿಸಲೇ ಬೇಕಾಗುತ್ತದೆ ಮತ್ತು ಅನಿವಾರ್ಯವಾಗಿ ಅಲ್ಲಿನ ಮತದಾರರ ಮೇಲೆ ಮತ್ತೊಂದು ಚುನಾವಣೆಯನ್ನು ಹೇರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಅವರ ಮಗ ಚುನಾವಣೆಗೆ ನಿಂತಿದ್ದಾರಾದರೂ, ಪರೋಕ್ಷವಾಗಿ ಅವರು ಸಿದ್ದರಾಮಯ್ಯ ಹೆಸರಲ್ಲೇ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಮಾತ್ರವಲ್ಲ, ಸಿದ್ದರಾಮಯ್ಯ ಅವರ ಹೆಸರಲ್ಲೇ ಮತಯಾಚನೆ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಪುತ್ರ ಎನ್ನುವ ಕಾರಣಕ್ಕೇ ಜನರು ಮತಹಾಕುತ್ತಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲೇ ಬೇಕಾದಂತಹ ಅನಿವಾರ್ಯ ಸನ್ನಿವೇಶ ಸಿದ್ದರಾಮಯ್ಯರಿಗೆ ಸೃಷ್ಟಿಯಾಗಿದೆ.

ಕಾಂಗ್ರೆಸನ್ನು ರಾಜ್ಯದಲ್ಲಿ ದುರ್ಬಲಗೊಳಿಸಬೇಕಾದರೆ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನಿಂದ ದೂರ ಮಾಡಬೇಕು. ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ದೂರವಾಗಬೇಕಾದುದು ಕೇವಲ ಜೆಡಿಎಸ್ ಮತ್ತು ಬಿಜೆಪಿಯ ಬಯಕೆ ಮಾತ್ರವಲ್ಲ, ಕಾಂಗ್ರೆಸ್‌ನೊಳಗೂ ಅದರ ನಿರೀಕ್ಷೆಯಲ್ಲಿರುವವರು ಹಲವರಿದ್ದಾರೆ. ಕಾಂಗ್ರೆಸ್ ಇಂದು ರಾಜ್ಯದಲ್ಲಿ ಜನಪ್ರಿಯವಾಗಿರುವುದು ಸಿದ್ದರಾಮಯ್ಯ ಅವರಿಂದ ಎನ್ನುವುದು ವಿರೋಧ ಪಕ್ಷಗಳಿಗೆ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಆನಂತರದ ನಾಯಕರಿಗೆ ಶ್ರೀಸಾಮಾನ್ಯರನ್ನು ತಲುಪುವ ಶಕ್ತಿ ಕಡಿಮೆ. ಆದುದರಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತದ್ದೇ ಆದರೆ, ಕಾಂಗ್ರೆಸ್ ಪಕ್ಷದೊಳಗಿರುವ ನಾಯಕರು ಅದೇ ನೆಪದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಡುತ್ತಾರೆ. ಹಾಗಾದಲ್ಲಿ ಸಿದ್ದರಾಮಯ್ಯರ ರಾಜಕೀಯ ಬದುಕು ಸಂಪೂರ್ಣ ಮುಗಿದಂತೆ. ವಿಶ್ವನಾಥ್, ಶ್ರೀನಿವಾಸ ಪ್ರಸಾದ್‌ರಂತಹ ಅತಂತ್ರ ಜಾತ್ಯತೀತರಿಗೆ ಏಕಮೇವ ಅಜೆಂಡಾ ಸಿದ್ದರಾಮಯ್ಯರನ್ನು ಮುಗಿಸುವುದು ಮಾತ್ರ. ಆದರೆ ಸಿದ್ದರಾಮಯ್ಯರನ್ನು ಸೋಲಿಸಿ ರಾಜ್ಯಕ್ಕೆ ಇವರು ನೀಡುವ ಪರ್ಯಾಯ ನಾಯಕ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ. ಆರಂಭದಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಾರೆ ಎಂದು ಘೋಷಣೆಯಾಗಿತ್ತು. ಆದರೆ ಹೀಗೆ ಘೋಷಣೆಯಾದ ಎರಡೇ ದಿನಗಳಲ್ಲಿ ತನ್ನ ನಿರ್ಧಾರದಿಂದ ಕಾಂಗ್ರೆಸ್ ಹಿಂದೆ ಸರಿಯಿತು. ತನ್ನ ವರ್ಚಸ್ಸಿನ ಬಲದಿಂದಲೇ ಎಲ್ಲ ಅಡೆತಡೆಗಳನ್ನು ನಿವಾರಿಸಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಹೈಕಮಾಂಡ್‌ನಿಂದ ಪಡೆದರು.

ಒಬ್ಬ ರಾಜಕಾರಣಿಯಾಗಿ ಸಿದ್ದರಾಮಯ್ಯ ಇನ್ನಷ್ಟು ವರ್ಷಗಳ ಕಾಲ ವಿಧಾನಸಭೆಯಲ್ಲಿ ಇರಬೇಕು. ಅವರಂತಹ ಹಿರಿಯ ಸದನ ಪಟು, ಬಡವರ ಪರವಾದ ಆರ್ಥಿಕ ದೃಷ್ಟಿಕೋನವಿರುವ ನಾಯಕನನ್ನು ಸೋಲಿಸುವುದರಿಂದ ಕೆಲವೇ ಕೆಲವರ ಸ್ವಾರ್ಥ ಈಡೇರಬಹುದು. ಆದರೆ ಸಿದ್ದರಾಮಯ್ಯ ಇಲ್ಲದ ಸದನವನ್ನು ಕಲ್ಪಿಸುವುದು ಕಷ್ಟ. ಸಿದ್ದರಾಮಯ್ಯ ಉದ್ಧಟ, ನಿಷ್ಠುರವಾದಿ ಎಂಬೆಲ್ಲ ಆರೋಪಗಳಿವೆ ನಿಜ. ಆದರೆ ಎಂದೂ ಭ್ರಷ್ಟರಾಗಿ ಗುರುತಿಸಿಕೊಳ್ಳಲಿಲ್ಲ. ಗೆಲ್ಲುವುದಕ್ಕಾಗಿ ತೀರಾ ನೀಚ ರಾಜಕಾರಣಕ್ಕೆ ಇಳಿದವರಲ್ಲ. ಕಾಂಗ್ರೆಸ್ ಪಕ್ಷದಾಚೆಗೆ ತನ್ನದೇ ವ್ಯಕ್ತಿತ್ವವನ್ನು ಉಳಿಸಿಕೊಂಡವರು, ಬೆಳೆಸಿಕೊಂಡವರು. ಆದುದರಿಂದ, ಸದ್ಯಕ್ಕೆ ರಾಜಕೀಯ ಚಕ್ರವ್ಯೆಹದಲ್ಲಿ ಸಿಲುಕಿಕೊಳ್ಳದೆ ಪಾರಾಗುವುದಕ್ಕೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸಿದ್ದರಾಮಯ್ಯರ ಅಗತ್ಯ ಮಾತ್ರವಲ್ಲ, ಅದು ವಿಧಾನಸಭೆಯ ಅಗತ್ಯವೂ ಕೂಡ. ಚಾಮುಂಡೇಶ್ವರಿಯಲ್ಲಿ ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾಗುವುದಕ್ಕಿಂತ ರಾಜಕೀಯ ತಂತ್ರ ಬಳಸಿ ಒಂದು ಕ್ಷೇತ್ರವನ್ನಾದರೂ ಉಳಿಸುವುದು ಅವರ ಪಾಲಿಗೆ ಅತ್ಯುತ್ತಮ ರಾಜಕೀಯ ನಡೆಯಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದಲೇ ಸಿದ್ದರಾಮಯ್ಯ ಬಾದಾಮಿಯ ಕಡೆಗೆ ವಾಲಿದ್ದಾರೆ ಎಂದು ಟೀಕಿಸುವವರು, ಅವರ ಭಯದ ಕಾರಣವನ್ನು ಸ್ಪಷ್ಟಪಡಿಸುತ್ತಿಲ್ಲ.

ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡಿಲ್ಲ ಎನ್ನುವ ಕಾರಣಕ್ಕೆ ಅಥವಾ ಕೆಟ್ಟ ಆಡಳಿತವನ್ನು ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಸಿದ್ದರಾಮಯ್ಯರನ್ನು ತಿರಸ್ಕರಿಸುತ್ತಾರೆ ಎಂದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ನೊಳಗಿನ ಕೆಲವು ನಾಯಕರ ಅಕ್ರಮ ಮೈತ್ರಿಯಿಂದ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರಿಗೆ ಸೋಲುವ ಭಯ ಕಾಡುತ್ತಿದೆಯೆಂದಾದರೆ ಅದನ್ನು ಸಿದ್ದರಾಮಯ್ಯರ ಸೋಲು ಎನ್ನಲಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಕಡೆಗೆ ಮನ ಮಾಡಿರುವುದು ಶ್ಲಾಘನೀಯವೂ ಆಗಿದೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಅವರು ಬೆಸೆದಂತಾಗಿದೆ. ಬಾದಾಮಿಯಿಂದಲೇ ಸಿದ್ದರಾಮಯ್ಯ ಆರಿಸಿಬಂದರೆ ಮುಂದಿನ ದಿನಗಳಲ್ಲಿ ಅದು ಉತ್ತರ ಕರ್ನಾಟಕದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಬಹುದು. ಉತ್ತರ ಕರ್ನಾಟಕದ ಜನರಲ್ಲಿ ಬೆಂಗಳೂರಿನ ಕುರಿತಂತೆ ಅಸಮಾಧಾನವಿದೆ. ಉತ್ತರ ಕರ್ನಾಟಕದ ಜನರ ಜೊತೆಗೆ ಮಲತಾಯಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎನ್ನುವ ಟೀಕೆ ಆಗಾಗ ಕೇಳಿ ಬರುತ್ತದೆ. ಸಿದ್ದರಾಮಯ್ಯ ಸ್ವತಃ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಹೊರಟಿರುವುದರಿಂದ, ಅಲ್ಲಿಯ ಜನರ ಸಮಸ್ಯೆಗಳಿಗೆ ನೇರ ಮುಖಾಮುಖಿಯಾಗಲು ಅವರಿಗೆ ಸಾಧ್ಯವಾಗಬಹುದು. ಅಲ್ಲಿಯ ಬರಗಾಲ, ರೈತರ ನೋವು ದುಮ್ಮಾನಗಳಿಗೆ ಸ್ಪಂದಿಸಲು ಸಿದ್ದರಾಮಯ್ಯರಿಗಿಂತ ಯೋಗ್ಯ ವ್ಯಕ್ತಿ ಇನ್ನಿಲ್ಲ ಎನ್ನಬಹುದು.

ಒಂದು ವೇಳೆ ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಅವರು ಶಾಸಕರಾಗಿ ಬಾದಾಮಿಯನ್ನೇ ಆರಿಸಿಕೊಳ್ಳಬೇಕು. ಅದು ದಕ್ಷಿಣ ಕರ್ನಾಟಕದಿಂದ ಬಂದ ಮುಖ್ಯಮಂತ್ರಿಯೊಬ್ಬ ಉತ್ತರ ಕರ್ನಾಟಕಕ್ಕೆ ನೀಡುವ ಗೌರವವೂ ಹೌದು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿ ಅಥವಾ ಗೆಲ್ಲಲಿ ಆದರೆ ಸಿದ್ದರಾಮಯ್ಯ ಮಾತ್ರ ಸೋಲಬಾರದು. ಹಾಗೆಯೇ ಸಿದ್ದರಾಮಯ್ಯರಂತಹ ವ್ಯಕ್ತಿತ್ವ ಇರುವ ಹಲವು ನಾಯಕರು, ಸದನಪಟುಗಳು ಬೇರೆ ಬೇರೆ ಪಕ್ಷಗಳಲ್ಲಿ ಹರಡಿಕೊಂಡಿದ್ದಾರೆ. ಅವರೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ಒಂದು ಕಾಲವಿತ್ತು. ಒಬ್ಬ ಯೋಗ್ಯ ಅಭ್ಯರ್ಥಿ ಚುನಾವಣೆಗೆ ನಿಂತಾಗ ಉಳಿದ ಪಕ್ಷಗಳೆಲ್ಲ ಅವರ ವ್ಯಕ್ತಿತ್ವಕ್ಕೆ ಗೌರವ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದವು. ಅಥವಾ ಆತನ ಗೆಲುವಿಗೆ ಬೇಕಾದ ವಾತಾವರಣಕ್ಕೆ ಸ್ಪಂದಿಸುತ್ತಿದ್ದವು. ಆದರೆ ಇಂದು ಸಿದ್ದರಾಮಯ್ಯರ ಸೋಲಿಗೆ ಜಾತ್ಯತೀತ ಮತ್ತು ದಲಿತ ಹಿನ್ನೆಲೆ ಇರುವ ಶಕ್ತಿಗಳೇ ಒಂದಾಗಿರುವುದು ವಿಪರ್ಯಾಸ. ಇಂತಹ ಸಮಯಸಾಧಕ ರಾಜಕಾರಣ ರಾಜ್ಯಕ್ಕೆ ಖಂಡಿತ ಒಳಿತನ್ನು ಮಾಡಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News