ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ರೇಸ್‌ನಲ್ಲಿ ಆರ್‌ಬಿಐ ಮಾಜಿ ಗವರ್ನರ್

Update: 2018-04-24 03:43 GMT

ಲಂಡನ್, ಎ.24: ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಹುದ್ದೆಗೆ ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞರ ಹುಡುಕಾಟ ನಡೆದಿದ್ದು, ಗವರ್ನರ್ ಹುದ್ದೆ ರೇಸ್‌ನಲ್ಲಿ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರೂ ಇದ್ದಾರೆ ಎಂಬ ವರದಿ ಹರಡಿದೆ.

ಬ್ಯಾಂಕಿನ ಗವರ್ನರ್ ಆಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಕೆನಡಾ ಸಂಜಾತ ಮಾರ್ಕ್ ಕಾರ್ನಿ ಅವರ ಅಧಿಕಾರಾವಧಿ 2019ರ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಫೈನಾನ್ಶಿಯಲ್ ಟೈಮ್ಸ್ ಪಟ್ಟಿ ಮಾಡಿದ ಸಂಭಾವ್ಯ ಗವರ್ನರ್ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜನ್ ಹೆಸರೂ ಇದೆ. ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರೊಫೆಸರ್ ಕ್ಯಾಥ್ರಿನ್ ದುಸಾಕ್ ಮಿಲ್ಲರ್ ಅವರ ಜತೆ, ಅಂತರ್ ರಾಷ್ಟ್ರೀಯ ಆರ್ಥಿಕತೆಯ ಅಪಾರ ಜ್ಞಾನ ಹಾಗೂ ಕೇಂದ್ರೀಯ ಬ್ಯಾಂಕಿಂಗ್ ಬಗ್ಗೆ ಹೊಂದಿರುವ ಅನುಭವದ ಹಿನ್ನೆಲೆ, ರಾಜನ್ ಅವರ ಪರವಾಗಿದೆ ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಮಾಡಿದ ಗಣನೀಯ ಸಾಧನೆಗಳೂ ಪೂರಕವಾಗಿವೆ ಎಂದು ವಿಶ್ಲೇಷಿಸಿದೆ.

ಆದರೆ ಈ ಹುದ್ದೆಯ ಬಗ್ಗೆ ರಾಜನ್ ಇದುವರೆಗೆ ಒಲವು ವ್ಯಕ್ತಪಡಿಸಿಲ್ಲ. ಸಂಭಾವ್ಯರ ಪಟ್ಟಿಯಲ್ಲಿರುವ ಇತರ ಹೆಸರುಗಳೆಂದರೆ, ಇಂಗ್ಲೆಂಡ್ ಸರ್ಕಾರದ ಮಾಜಿ ವ್ಯಾಪಾರ ಸಚಿವೆ ಸಂತಂಡರ್ ಮುಖ್ಯಸ್ಥೆ ಭಾರತೀಯ ಮೂಲದ ಶ್ರುತಿ ವಡೇರಾ. ರಾಜನ್ ಈ ಹುದ್ದೆಗೆ ಆಯ್ಕೆಯಾದರೆ ಹಾಗೂ ಈ ಹುದ್ದೆಯನ್ನು ನಿರ್ವಹಿಸಲು ಇಷ್ಟಪಟ್ಟರೆ, ಮೂರು ಶತಮಾನಗಳ ಇತಿಹಾಸದಲ್ಲಿ ಇಂಗ್ಲೆಂಡಿನ ಅತ್ಯುನ್ನತ ಬ್ಯಾಂಕ್‌ನ ಮುಖ್ಯಸ್ಥ ಹುದ್ದೆಗೆ ಏರಿದ ಎರಡನೇ ವಿದೇಶಿ ತಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಕಾರ್ನಿ ಈ ಸಾಧನೆ ಮಾಡಿದ ಮೊಟ್ಟಮೊದಲಿಗರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News