ಪಾಕಿಸ್ತಾನದಲ್ಲಿ ಕಣ್ಮರೆಯಾಗಿದ್ದ ಸಿಖ್ ಯಾತ್ರಿ ಫೇಸ್‌ಬುಕ್ ಸ್ನೇಹಿತನ ಮನೆಯಲ್ಲಿ ಪತ್ತೆ!

Update: 2018-04-24 04:28 GMT

ಲಾಹೋರ್, ಎ.24: ಸಿಖ್ಖರ ಬೈಶಾಖ್ ಜಾಥಾ ವೇಳೆ ಪಾಕಿಸ್ತಾನದಲ್ಲಿ ಕಣ್ಮರೆಯಾಗಿದ್ದ ಯಾತ್ರಿ, ಅಮರ್‌ಜೀತ್ ಸಿಂಗ್(24) ಸೋಮವಾರ ಶೇಖುಪುರದಲ್ಲಿರುವ ತನ್ನ ಫೇಸ್‌ಬುಕ್ ಸ್ನೇಹಿತನ ಮನೆಯಲ್ಲಿ ಪತ್ತೆಯಾಗುವುದರೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ. ಅಮೃತಸರದ ಬಾಬಾ ಬಕಾಲಾದ ನಿವಾಸಿಯಾಗಿದ್ದ ಸಿಂಗ್, ಎ.12ರಂದು 1,700 ಕಿಲೋಮೀಟರ್ ಯಾತ್ರೆಯಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ ಯಾತ್ರಿಕರು ಎ.21ರಂದು ಅಮೃತಸರಕ್ಕೆ ಬಂದ ಬಳಿಕವಷ್ಟೇ ಈತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಮಂಗಳವಾರ ಅತ್ತರಿ- ವಾಘಾ ಗಡಿಯಲ್ಲಿ ಮಂಗಳವಾರ ಆತನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಜಿಯೊ ಟಿವಿ ಹೇಳಿದೆ.

"ಸಿಂಗ್, ನನ್ಕನಾ ಸಾಹಿಬ್ ವರೆಗೆ ಯಾತ್ರೆಯಲ್ಲಿ ಬಂದು, ತನ್ನ ಗುಂಪಿನಿಂದ ಬೇರ್ಪಟ್ಟು, ಶೇಖುಪುರದಲ್ಲಿರುವ ತನ್ನ ಫೇಸ್‌ಬುಕ್ ಸ್ನೇಹಿತ ಅಮೀರ್ ರಝಾಕ್ ಎಂಬಾತನನ್ನು ಭೇಟಿ ಮಾಡಲು ಹೋದ. ರಝಾಕ್ ಕುಟುಂಬ ಎವೆಕ್ಯೂ ಟ್ರಸ್ಟ್ ಆಸ್ತಿ ಮಂಡಳಿ (ಇಟಿಪಿಬಿ)ಗೆ ಮಾಹಿತಿ ನೀಡಿದೆ. ಇಂದು ರಝಾಕ್ ಹಾಗೂ ಅಮರ್‌ಜೀತ್ ಜತೆಗೆ ಲಾಹೋರ್‌ನಲ್ಲಿರುವ ಇಟಿಪಿಬಿ ಕಚೇರಿಗೆ ಭೇಟಿ ನೀಡಿದ್ದಾರೆ" ಎಂದು ಇಟಿಪಿಬಿ ವಕ್ತಾರ ಅಮೀರ್ ಹಶ್ಮಿ ವಿವರಿಸಿದ್ದಾರೆ.

ಅಮರ್‌ಜೀತ್ ಸಿಂಗ್ ನಾಪತ್ತೆಯಾಗಿಲ್ಲ. ಒಂದು ತಿಂಗಳ ವೀಸಾ ಇದೆ ಎಂಬ ಭಾವನೆಯಿಂದ ಸ್ನೇಹಿತನ ಮನೆಯಲ್ಲಿ ಕೆಲ ವಾರ ಕಳೆದು ವಾಪಸ್ ಹೋಗಲು ನಿರ್ಧರಿಸಿದ್ದ ಎಂದು ಹಶ್ಮಿ ಹೇಳಿದ್ದಾರೆ. ಸಿಂಗ್ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆತ ಉದ್ದೇಶಪೂರ್ವಕವಾಗಿ ಕಣ್ಮರೆಯಾಗಿಲ್ಲ ಹಾಗೂ ಭಾರತೀಯ ಗುಪ್ತಚರ ವಿಭಾಗದ ಜತೆ ಯಾವ ಸಂಪರ್ಕವನ್ನೂ ಹೊಂದಿಲ್ಲ ಎನ್ನುವುದು ಖಾತ್ರಿಯಾದ ಬಳಿಕ, ಇಟಿಪಿಬಿಗೆ ಹಸ್ತಾಂತರಿಸಿ, ಭಾರತಕ್ಕೆ ಗಡೀಪಾರು ಮಾಡಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News