ದಲಿತ ಪದ ಕೈಬಿಡಲು ಆರೆಸ್ಸೆಸ್ ಸೂಚನೆ!

Update: 2018-04-25 03:52 GMT

ಹೊಸದಿಲ್ಲಿ, ಎ.25: ದಲಿತ ಎಂಬ ಪದ ಸಾಮ್ರಾಜ್ಯಶಾಹಿಯ ಅನುಬಂಧವಾಗಿದ್ದು, ಅವಹೇಳನಕಾರಿ ಸೂಚಕವಾಗಿದೆ. ಆದ್ದರಿಂದ ತನ್ನ ಕಾರ್ಯಕರ್ತರು ಆ ಪದ ಬಳಕೆ ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಫರ್ಮಾನು ಹೊರಡಿಸಿದೆ.

ದಲಿತ ಪದದ ಬದಲಾಗಿ ಸಂವಿಧಾನಾತ್ಮಕವಾಗಿ ಆಂಗೀಕೃತವಾದ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಎಂಬ ಪದವನ್ನೇ ಬಳಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಹಿರಿಯ ನೇತಾರರೊಬ್ಬರು ಬಹಿರಂಗಪಡಿಸಿದ್ದಾರೆ.

ಸಂವಿಧಾನಾತ್ಮಕ ಮನ್ನಣೆ ಇರುವ ಎಸ್ಸಿ ಹಾಗೂ ಎಸ್ಟಿ ಎಂಬ ಪದವೇ ಹೆಚ್ಚು ಸಮರ್ಪಕ ಎಂಬ ನಿರ್ಧಾರಕ್ಕೆ ನಮ್ಮ ಸಂಘಟನೆ ಬಂದಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಎಸ್ಸಿ ಹಾಗೂ ಎಸ್ಟಿ ಎಂಬ ಪದ ಜಾತಿ ಸೂಚಕವಲ್ಲ ಹಾಗೂ ಅವಮಾನಕರವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ದಲಿತ ಪದ ಬಳಕೆಯಿಂದ ಹಿಂದೆ ಸರಿಯುವಂತೆ ಕಳೆದ ವಾರ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದು, ದಲಿತ ಪದ ಬಳಕೆ ಮಾಡದಂತೆ ಸೂಚಿಸಿತ್ತು. ಭಾರತದ ಸಂವಿಧಾನ ಅಥವಾ ಯಾವುದೇ ಅಧಿಕೃತ ದಾಖಲೆಗಳಲ್ಲಿ ದಲಿತ ಎಂಬ ಪದ ಇಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.

ಆದರೆ ಮರಾಠಿಯಲ್ಲಿ ದಲಿತ ಎಂಬ ಪದದ ಅರ್ಥ ತುಳಿತಕ್ಕೆ ಒಳಗಾದವರು ಎಂದಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಇದನ್ನು ಜನಪ್ರಿಯಗೊಳಿಸಿದ್ದರು ಎಂದು ಸೆಂಟರ್ ಫಾರ್ ಪಾಲಿಸಿ ರೀಸರ್ಚ್ ಸಂಸ್ಥೆಯ ದಲಿತ ಅಧ್ಯಯನ ವಿಭಾಗದ ಡಿ.ಶ್ಯಾಮಬಾಬು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News