ಕತ್ತಲ ಕೋಣೆ ಸೇರಿದ ನಕಲಿ ದೇವಮಾನವ

Update: 2018-04-26 04:38 GMT

ಅತ್ಯಾಚಾರ, ವಂಚನೆ, ಕೊಲೆ ಮುಂತಾದ ಅಪರಾಧಗಳನ್ನು ಮಾಡಿಯೂ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುವ ವರ್ಗವೊಂದು ಈ ದೇಶದಲ್ಲಿದೆ. ದೇವರ ದಲ್ಲಾಳಿಗಳೆಂದು ಹೇಳಿಕೊಳ್ಳುವ ಕಾವಿ ಧರಿಸಿದ, ಧರ್ಮದ ಬಗ್ಗೆ ಆಕರ್ಷಕ ಮಾತುಗಳನ್ನಾಡುವ ನಯವಂಚಕರು ಎಲ್ಲ ಅಪರಾಧ ಕೃತ್ಯ ಎಸಗಿಯೂ ಸುರಕ್ಷಿತವಾಗಿರುತ್ತಾರೆ. ಸಾವಿರಾರು ಕೋಟಿ ರೂ. ಆಸ್ತಿ ಮಾಡಿ ಸಂಸಾರಿಗರಿಗಿಂತ ವೈಭವದ ಜೀವನ ನಡೆಸುತ್ತಾರೆ. ಇಂತಹ ಸನ್ಯಾಸಿಗಳು ನಮ್ಮ ದೇಶದಲ್ಲಿ ಸಾಕಷ್ಟಿದ್ದಾರೆ. ಅವರಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಕೂಡಾ ಒಬ್ಬ. ಈ ಅಸಾರಾಂ ಬಾಪು ವಿಕೃತ ಕಾಮಿ. ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಅವರನ್ನು ಕೊಲೆ ಮಾಡಿ ಬಿಸಾಕಿದ ಆರೋಪಗಳೂ ಇವನ ಮೇಲಿವೆ. ಸಂಘಪರಿವಾರದ ಆಪ್ತನಾಗಿದ್ದ ಈತ ಇಷ್ಟು ದಿನ ಪ್ರಭಾವಿ ರಾಜಕೀಯ ಶಕ್ತಿಗಳ ಬೆಂಬಲದಿಂದ ಸುರಕ್ಷಿತವಾಗಿ ಪಾರಾಗಿ ಬಂದಿದ್ದ. ಆದರೆ, ಈತನಿಗೆ ಜೋಧ್‌ಪುರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅಸಾರಾಂ ಬಾಪು ರಾಜಸ್ಥಾನದ ತನ್ನ ಆಶ್ರಮದಲ್ಲಿ 2013ರಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದ. ಬಾಲಕಿ ಈತನ ವಿರುದ್ಧ ದೂರು ನೀಡಿದ್ದಳು. ಈ ದೂರಿನ ಅನ್ವಯ 2013ರಲ್ಲಿ ಈತನನ್ನು ಬಂಧಿಸಲಾಗಿತ್ತು. ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆ ನಡೆದು ನ್ಯಾಯಾಲಯ ಈತನನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಂಘಪರಿವಾರದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಸಾರಾಂ ಬಾಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯಂತ ಆಪ್ತ. ಮೋದಿ ಈತನ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ‘ನೀವೇ ನನ್ನ ಪರಮ ಗುರು’ ಎಂದು ಅನೇಕ ಬಾರಿ ಆತನ ಪಾದಕ್ಕೆ ಎರಗಿದ್ದರು. ಗುಜರಾತ್‌ನಲ್ಲಿ ಆತ ಮಾಡಿದ ಅನೇಕ ಹಗರಣಗಳಿಗೆ, ಸರಕಾರಿ ಭೂಮಿ ಒತ್ತುವರಿಗೆ ಮೋದಿ ರಕ್ಷಣೆ ನೀಡುತ್ತಾ ಬಂದಿದ್ದರು. ಇಂತಹವನನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ಮೋದಿ ಈಗ ರಾಷ್ಟ್ರದ ಕ್ಷಮೆ ಕೇಳಬೇಕಾಗಿದೆ. ಎಲ್ಲ ದೇವಮಾನವರಂತೆ ಈತ ಕೂಡಾ ಭಕ್ತರಿಗೆ ಪ್ರಪಂಚವೆಲ್ಲಾ ಮಾಯೆ, ಅದರ ವ್ಯಾಮೋಹವನ್ನು ಬಿಟ್ಟುಬಿಡಿ ಎಂದು ಉಪದೇಶ ನೀಡುತ್ತಿದ್ದ. ಆದರೆ, ತಾನು ಮಾತ್ರ ಸಾವಿರಾರು ಕೋಟಿ ರೂ. ಆಸ್ತಿಗಳನ್ನು ಗಳಿಸಿ ವೈಭವದ ಜೀವನ ನಡೆಸುತ್ತಿದ್ದ. ಈತನ ಆಶ್ರಮದ ಕೊಠಡಿಗಳು ಪಂಚತಾರಾ ಹೊಟೇಲ್‌ನ ಕೊಠಡಿಗಳಿಗಿಂತ ಮಿಗಿಲಾಗಿದ್ದವು. ಅಲ್ಲಿ ಆತ ಹುಡುಗಿಯರೊಂದಿಗೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ. ತನ್ನನ್ನು ಒಪ್ಪಿಕೊಳ್ಳದವರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಆದರೂ ಈತನನ್ನು ಆರಾಧಿಸುವ ಲಕ್ಷಾಂತರ ಭಕ್ತರು ಈ ದೇಶದಲ್ಲಿದ್ದಾರೆ. ಬಾಬಾ ರಾಮ್‌ದೇವ್‌ರಂತೆ ಆಯುರ್ವೇದ ಔಷಧಿಗಳನ್ನು, ವಿಲಾಸ ಸಾಮಗ್ರಿಗಳನ್ನು ಉತ್ಪಾದನೆ ಮಾಡುತ್ತಿದ್ದ ಈ ಅಸಾರಾಂ ಬಾಪುವಿನ ವ್ಯಾಪಾರ ಮಳಿಗೆಗಳು ದೇಶದ ತುಂಬಾ ಎಲ್ಲ ಕಡೆಗಳಲ್ಲೂ ಇವೆ.

ಈತನ ಆಶ್ರಮದಲ್ಲಿ ಕೆಲ ಕೊಲೆಗಳೂ ನಡೆದಿವೆ ಎಂಬ ದೂರುಗಳು ಆಗಾಗ ಬರುತ್ತಿದ್ದವು. ಆದರೆ, ಉನ್ನತ ಮಟ್ಟದ ರಕ್ಷಣೆಯಿಂದ ಈತ ಸುರಕ್ಷಿತವಾಗಿದ್ದ. ಪ್ರಧಾನಿ ಮೋದಿಯವರಿಗೆ ಮಾತ್ರವಲ್ಲ, ಬಿಜೆಪಿ ನಾಯಕರಾದ ಅಡ್ವಾಣಿ ಹಾಗೂ ವಾಜಪೇಯಿ ಅವರಿಗೂ ಈತ ಆಪ್ತನಾಗಿದ್ದ. ಈ ಅಸಾರಾಂ ಬಾಪುವನ್ನು ರಕ್ಷಿಸಲು ಉನ್ನತ ಮಟ್ಟದಲ್ಲಿ ಭಾರೀ ಯತ್ನಗಳು ನಡೆದಿದ್ದವು. ಈತನ ಅಪರಾಧ ಪ್ರಕರಣಗಳ ವಿಚಾರಣೆಯ ಹಂತದಲ್ಲೇ 9 ಜನ ಸಾಕ್ಷಿಗಳ ಮೇಲೆ ದಾಳಿಯಾಗಿ ಮೂವರ ಕೊಲೆಯೂ ಆಗಿತ್ತು. ಇಷ್ಟೆಲ್ಲ ಒತ್ತಡವಿದ್ದರೂ ಜೋಧ್‌ಪುರ ನ್ಯಾಯಾಲಯ ಈತನ ಅಪರಾಧಗಳ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಆತನನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆಗೆ ಗುರಿಪಡಿಸಿದ್ದು ಸ್ವಾಗತಾರ್ಹವಾಗಿದೆ. ಈ ಅಸಾರಾಂ ಬಾಪು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಹಿಂಸಿಸಿ, ವಿಕೃತ ಕಾಮಚೇಷ್ಟೆಗೆ ಗುರಿಪಡಿಸುತ್ತಿದ್ದ. ಈ ಕುರಿತು ಅನೇಕ ದೂರುಗಳು ಬಂದ ನಂತರ ಈತನನ್ನು ಬಂಧಿಸಲಾಗಿತ್ತು. ಕೆಲ ತಿಂಗಳ ಹಿಂದೆ ಹರ್ಯಾಣದಲ್ಲಿ ಗುರ್ಮಿತ್ ಸಿಂಗ್ ಎಂಬಾತ ಇದೇ ರೀತಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಾಗ ಹರ್ಯಾಣದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಆ ಹಿಂಸಾಚಾರ ತಡೆಯಲು ಅಲ್ಲಿನ ಬಿಜೆಪಿ ಸರಕಾರ ವಿಫಲಗೊಂಡಿತ್ತು. ಕೊನೆಗೆ ಹಿಂಸಾಚಾರವನ್ನು ಹತ್ತಿಕ್ಕಲು ಸೇನಾ ಪಡೆ ಬರಬೇಕಾಯಿತು. ಅಸಾರಾಂ ಪ್ರಕರಣದಲ್ಲೂ ಹಾಗಾಗಬಾರದೆಂದು ಬಿಗಿ ಬಂದೋ ಬಸ್ತ್ ಮಾಡಿ ಈ ತೀರ್ಪನ್ನು ನೀಡಲಾಗಿದೆ.

77 ವರ್ಷದ ಅಸಾರಾಂ ಬಾಪು ಮೇಲೆ ಪೊಕ್ಸೊ ಕಾಯ್ದೆ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಈತನನ್ನು ಜಾಮೀನಿನ ಮೇಲೆ ಬಿಡಬೇಕೆಂದು ಸಲ್ಲಿಸಲಾಗಿದ್ದ 12 ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅಷ್ಟೇ ಅಲ್ಲದೆ, ಬಿಡುಗಡೆ ಮಾಡಬೇಕೆಂದು ತೆರೆಮರೆಯಲ್ಲಿ ಭಾರೀ ಪ್ರಯತ್ನಗಳು ನಡೆದಿದ್ದವು. ಆದರೆ, ನ್ಯಾಯಾಲಯ ಯಾವ ಒತ್ತಡಕ್ಕೂ ಮಣಿಯಲಿಲ್ಲ. ಪಾಕಿಸ್ತಾನ ಮೂಲದ ಈ ಅಸಾರಾಂ ಬಾಪು ಚಿಕ್ಕ ವಯಸ್ಸಿನಲ್ಲೇ ಭಾರತಕ್ಕೆ ಬಂದು ಆರಂಭದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ. ನಂತರ ಧಾರ್ಮಿಕ ಗುರುವೊಬ್ಬನ ಶಿಷ್ಯನಾಗಿ ಅಧ್ಯಾತ್ಮದ ದಂಧೆಗೆ ಇಳಿದ. 1970 ದಶಕದಲ್ಲಿ ಬಿಳಿ ಬಟ್ಟೆ ಧರಿಸಿ ಧಾರ್ಮಿಕ ಪ್ರವಚನಗಳನ್ನು ಆರಂಭಿಸಿದ ಅಸಾರಾಂ ಬಾಪು ಕೆಲವೇ ದಿನಗಳಲ್ಲಿ ಪ್ರಖ್ಯಾತ ಗುರುವಾಗಿ ಕಾಣಿಸಿಕೊಂಡ. 1972ರಲ್ಲಿ ಗುಜರಾತ್‌ನ ಸಬರ್‌ಮತಿ ನದಿ ದಂಡೆಯಲ್ಲಿ ಜೋಪಡಿಯೊಂದನ್ನು ಕಟ್ಟಿಕೊಂಡು ಆಶ್ರಮ ಮಾಡಿ ನಿಧಾನವಾಗಿ ಧರ್ಮ ಗುರುವಾಗಿ ಬೆಳೆಯುತ್ತಾ ಬಂದ. ಆತನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಲೇ ಬಂತು. 2008ರಲ್ಲಿ ಅಸಾರಾಂ ಬಾಪುವಿನ ಮೊಟೇರಾ ಆಶ್ರಮದ ಬಳಿ ಚಿಕ್ಕಮಕ್ಕಳ ಎರಡು ಕಳೇಬರಗಳು ಪತ್ತೆಯಾಗಿದ್ದವು. ವೈದ್ಯಕೀಯ ವರದಿಗಳ ಪ್ರಕಾರ ಮಕ್ಕಳ ದೇಹದ ಒಳಗಿನ ಅಂಗಾಂಗಗಳನ್ನು ನಾಪತ್ತೆ ಮಾಡಲಾಗಿತ್ತು. ಈ ಅಂಶ ಅಸಾರಾಂ ಬಾಪು ಮೇಲೆ ಸಂಶಯ ಹೆಚ್ಚಾಗುವಂತೆ ಮಾಡಿತು.

ಕೆಲ ದಿನಗಳಲ್ಲಿ ಅಸಾರಾಂ ಬಾಪು ಹೆಸರು ಸೂರತ್‌ನ ಭೂಕಬಳಿಕೆ ಪ್ರಕರಣದಲ್ಲಿ ಕೂಡಾ ಕೇಳಿ ಬಂದಿತ್ತು. ಹೀಗೆ ಅಧ್ಯಾತ್ಮದ ವೇಷ ಹಾಕಿದ ಅಸಾರಾಂ ಬಾಪು ಮೇಲೆ ಮತ್ತು ಅವನ ಮಗ ನಾರಾಯಣ ಸಾಯಿ ಮೇಲೆ ಗುಜರಾತ್‌ನ ಸೂರತ್‌ನ ಇಬ್ಬರು ಸಹೋದರಿಯರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಇಷ್ಟೆಲ್ಲ ಪ್ರಕರಣಗಳಿದ್ದರೂ ಸರಕಾರದ ಬೆಂಬಲದಿಂದ ಅಸಾರಾಂ ಬಾಪು ತನ್ನ ಉದ್ಯಮ ವಲಯವನ್ನು ವಿಸ್ತರಿಸಿಕೊಂಡು 10 ಸಾವಿರ ಕೋಟಿ ರೂ. ಆಸ್ತಿಯನ್ನು ಸಂಪಾದಿಸಿದ. ದೇಶದಲ್ಲಿ ಈತನ 400 ಆಶ್ರಮಗಳಿವೆ. ಈತನ ಒಡೆತನದಲ್ಲಿ ದೊಡ್ಡ ಮುದ್ರಣಾಲಯವಿದೆ. ದೇಶದ ಎಲ್ಲ ಕಡೆ ಈತನ ವ್ಯಾಪಾರ ಮಳಿಗೆಗಳಿವೆ. ಇಂತಹ ಅಸಾರಾಂ ಬಾಪು ಈಗ ಶಿಕ್ಷೆಗೆ ಗುರಿಯಾಗಿ ಜೈಲುಪಾಲಾಗಿದ್ದಾನೆ. ಅಸಾರಾಂ ಬಿಡುಗಡೆಗೆ ಒತ್ತಾಯಿಸಿ ಆತನ ಅನುಯಾಯಿಗಳು ದೇಶದ ತುಂಬಾ ಆಂದೋಲನ ನಡೆಸಿದ್ದರು. ಆತನ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು. ಆದರೆ, ಈ ಭಕ್ತರ ಪ್ರಾರ್ಥನೆಗೆ ದೇವರು ಕಿವಿಗೊಡಲಿಲ್ಲ. ಎಷ್ಟೇ ಒತ್ತಡಗಳಿದ್ದರೂ ಜೋಧಪುರ ನ್ಯಾಯಾಲಯ ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದೆ. ಸರಕಾರ ಈಗಲಾದರೂ ಈತನ ಸಾವಿರಾರು ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡು ಅದನ್ನು ಅನ್ಯಾಯಕ್ಕೊಳಗಾದವರ ಪುನರ್ವಸತಿಗಾಗಿ ಬಳಸಿಕೊಳ್ಳಬೇಕಾಗಿದೆ. ಪರ್ಯಾಯ ಸರಕಾರದಂತೆ ಕಾರ್ಯ ನಿರ್ವಹಿಸುವ ಇಂತಹ ನಕಲಿ ದೇವ ಮಾನವರು ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಬಾಬಾ ರಾಮ್‌ದೇವ್ ಮೇಲೆ ಕೂಡಾ ಅನೇಕ ಆರೋಪಗಳಿವೆ. ಇಂತಹವರ ಮೇಲೆ ಸರಕಾರ ನಿಗಾ ವಹಿಸಬೇಕು. ಕರ್ನಾಟಕದಲ್ಲೂ ಅನೇಕ ಮಿನಿ ಅಸಾರಾಂ ಬಾಪುಗಳಿದ್ದಾರೆ. ಬೆಂಗಳೂರಿನ ಬಳಿ ಬಿಡದಿಯ ಸನ್ಯಾಸಿಯೊಬ್ಬರು ಹಾಗೂ ಸಾಗರದ ಸಮೀಪದ ಮಠಾಧೀಶರೊಬ್ಬರು ಅತ್ಯಾಚಾರದ ಪ್ರಕರಣಗಳನ್ನು ಎದುರಿಸಿದ್ದಾರೆ. ಅನೇಕ ಬಾರಿ ಹಲವಾರು ಪ್ರಭಾವಗಳನ್ನು ಬಳಸಿ ಅವರು ದೋಷಮುಕ್ತರಾಗಿ ಬಂದಿದ್ದರೂ ಭಕ್ತರ ಕಣ್ಣಿನಲ್ಲಿ ಇವರಿನ್ನೂ ಆರೋಪ ಮುಕ್ತರಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಮಠಾಧೀಶರೊಬ್ಬರ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವರನ್ನೇ ಬೆದರಿಸುವ ಯತ್ನವೂ ನಡೆದಿತ್ತು. ಮಠದ ಪರಂಪರೆಯ ರಕ್ಷಣೆಯ ಹೆಸರಿನಲ್ಲಿ ತನಿಖೆ ಪ್ರಕ್ರಿಯೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಹುನ್ನಾರ ನಡೆಯಿತು. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ನೇಮಿಸಲ್ಪಟ್ಟಿದ್ದ ನ್ಯಾಯಾಧೀಶರು ಒಬ್ಬೊಬ್ಬರಾಗಿ ಹಿಂದೆ ಸರಿದರು. ಈ ರೀತಿ ಪ್ರಭುತ್ವ ಮತ್ತು ನ್ಯಾಯಾಂಗವನ್ನು ಹೆದರಿಸಿ ರಕ್ಷಣೆ ಪಡೆಯುತ್ತಿರುವ ಅನೇಕ ಮಠಾಧೀಶರು, ದೇವಮಾನವರು ನಮ್ಮ ದೇಶದಲ್ಲಿದ್ದಾರೆ. ಇಂತಹವರನ್ನು ಗುರುತಿಸಿ ಉಗ್ರ ದಂಡನೆಗೆ ಗುರಿಪಡಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News