ಜನರ ಮನಸ್ಸು ಗೆಲ್ಲಲು ಆದ್ಯತೆ: ಪ್ರಕಾಶ್ ಜಾವಡೇಕರ್

Update: 2018-04-26 12:16 GMT

ಬೆಂಗಳೂರು, ಎ. 26: ನಾವಿಂದು ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳ ಜೊತೆ ಹೋರಾಟ ನಡೆಸುತ್ತಿಲ್ಲ. ಬದಲಿಗೆ ನಾವು ಜನರ ಮನಸ್ಸು ಗೆಲ್ಲುವ ವಿಶ್ವಾಸದೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಗುರುವಾರ ಬಿಜೆಪಿ ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿಚಾರಗಳ ಕೊರತೆಯಿಂದ ಬಳಲುತ್ತಿದ್ದು, ಕರ್ನಾಟಕ ರಾಜ್ಯದ ವಿಷಯಗಳನ್ನು ಪ್ರಸ್ತಾಪಿಸುವ ಬದಲು ಜಾಹೀರಾತು ಮೂಲಕ ಇತರ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಟೀಕಿಸಿದರು.

ನಾವು ಬೇರೆ ವಿಷಯ ಪ್ರಸ್ತಾಪಿಸದೆ ಕರ್ನಾಟಕ ರಾಜ್ಯದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತೇವೆ. ಜನರಿಗೆ ಲೆಕ್ಕ ಕೊಡಿ ಎಂದು ನಾವು ಕೇಳಬೇಕಿದೆ ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಿನ್ನೆ ಕೇಂದ್ರ ಸಚಿವ ಅನಂತ್ ಕುಮಾರ್ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನಾನು ಒತ್ತಾಯಿಸುವೆ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಈ ಪ್ರಶ್ನೆಗಳಿಗೆ ಉತ್ತರಿಸಬೇಕು. ರೈತರ ಸ್ಥಿತಿ ಇಷ್ಟು ಶೋಚನೀಯವಾಗಲು ಹಾಗೂ ಕಾಂಗ್ರೆಸ್ ಅವಧಿಯಲ್ಲೇ ರೈತರ ಆತ್ಮಹತ್ಯೆ ಹೆಚ್ಚಲು ಕಾರಣವೇನು? ಎಲ್ಲಿ ಕಾಂಗ್ರೆಸ್ ಆಡಳಿತ ಇದೆಯೋ ಅಲ್ಲೆಲ್ಲ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಏಕೆ? ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ನಡೆಸಿರುವ ವೀಡಿಯೋ ಸಂವಾದವು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವಂತೆ ಪ್ರೇರಣೆ ನೀಡಿದೆ ಎಂದು ಅವರು ಬಣ್ಣಿಸಿದರು.

ಮೋದಿಯವರು ಗ್ರಾಮೀಣ ಪ್ರದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎನ್ನುವ ಕುರಿತು ತಮ್ಮ ಚಿಂತನೆಯನ್ನು ವಿಸತ್ತೃತವಾಗಿ ಹಂಚಿಕೊಂಡಿದ್ದಾರೆಂದ ಅವರು, ಉದ್ಯಾನನಗರಿ ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದರು.

ಕಾರ್ಯಕರ್ತರೊಂದಿಗೆ ಮೋದಿ ನೇರ ಸಂವಾದ ನಡೆಸಿ, ಮತದಾರರ ಮನಸ್ಸು ಗೆದ್ದರೆ, ಚುನಾವಣೆ ಗೆದ್ದಂತೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಪುರುಷ ಕಾರ್ಯಕರ್ತರಷ್ಟೇ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರನ್ನೂ ಚುನಾವಣಾ ಕಾರ್ಯದಲ್ಲಿ ತೊಡಗಿಸಬೇಕೆಂದು ಮೋದಿ ಸೂಚಿಸಿದ್ದಾರೆ ಎಂದರು.

ರೆಡ್ಡಿ ನಮ್ಮ ಸ್ಟಾರ್ ಕ್ಯಾಂಪೇನರ್ ಅಲ್ಲ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅಲ್ಲ. ರೆಡ್ಡಿ ರಾಜ್ಯದ ಕೆಲ ಭಾಗದಲ್ಲಿ ತಮ್ಮ ಆಪ್ತರ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರನ್ನು ಪಕ್ಷದ ಸ್ಟಾರ್ ಕ್ಯಾಂಪೇನರ್ ಅಂತ ಗುರುತಿಸಿಲ್ಲ. ಅವರು ಜನಪ್ರಿಯತೆ ಇರುವ ಕೆಲ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ’
-ಪ್ರಕಾಶ್ ಜಾವಡೇಕರ್ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News