ಸುದೀರ್ಘಾವಧಿಯ ದೃಷ್ಟಿಕೋನದಿಂದ ಭಾರತ- ಚೀನಾ ಸಂಬಂಧದ ಅವಲೋಕನ: ಪ್ರಧಾನಿ ಮೋದಿ

Update: 2018-04-26 14:50 GMT

ಹೊಸದಿಲ್ಲಿ, ಎ.26: ಎಪ್ರಿಲ್ 27-28ರಂದು ವುಹಾನ್‌ನಲ್ಲಿ ಭೇಟಿಯಾದಾಗ ತಾನು ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಾರ್ಯತಂತ್ರ ಹಾಗೂ ಸುದೀರ್ಘಾವಧಿಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಭಾರತ- ಚೀನಾ ಸಂಬಂಧವನ್ನು ಅವಲೋಕನ ಮಾಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ದ್ವಿಪಕ್ಷೀಯ ಹಾಗೂ ಜಾಗತಿಕ ಮಹತ್ವದ ಹಲವು ವಿಷಯಗಳ ಬಗ್ಗೆ ತಾನು ಮತ್ತು ಚೀನಾದ ಪ್ರಧಾನಿ ಅಭಿಪ್ರಾಯ ಹಂಚಿಕೊಳ್ಳಲಿದ್ದೇವೆ. ಪ್ರಸಕ್ತ ಹಾಗೂ ಭವಿಷ್ಯದ ಅಂತಾರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ತಾವಿಬ್ಬರೂ ರಾಷ್ಟ್ರೀಯ ಅಭಿವೃದ್ಧಿಗೆ ತಮ್ಮ ತಮ್ಮ ಯೋಜನೆ ಹಾಗೂ ದೃಷ್ಟಿಕೋನವನ್ನು ವಿವರಿಸಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

 ಪ್ರಧಾನಿ ಮೋದಿಯ ಚೀನಾ ಭೇಟಿಯನ್ನು 1988ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಚೀನಾ ಭೇಟಿಗೆ ಹೋಲಿಸಲಾಗುತ್ತಿದೆ . 1962ರ ಯುದ್ದದ ಬಳಿಕ ವಿಷಮಗೊಂಡಿದ್ದ ಭಾರತ-ಚೀನಾ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ರಾಜೀವ್ ಭೇಟಿ ಮಹತ್ವದ ಹೆಜ್ಜೆಯಾಗಿತ್ತು. ಇದೇ ರೀತಿ ಕಳೆದ ವರ್ಷ ಭಾರತ- ಚೀನಾ ಪಡೆಗಳ ಮಧ್ಯೆ ಸಿಕ್ಕಿಂ ಬಳಿಯ ಡೋಕಾಲಾ ದಲ್ಲಿ 73 ದಿನಗಳವರೆಗೆ ನಡೆದಿದ್ದ ಬಿಕ್ಕಟ್ಟಿನ ಪರಿಸ್ಥಿತಿಯ ಬಳಿಕ ಉಭಯ ದೇಶಗಳ ಬಾಂಧವ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮೋದಿಯವರ ಚೀನಾ ಪ್ರವಾಸಕ್ಕೆ ಹೆಚ್ಚಿನ ಮಹತ್ವವಿದೆ. ಭಾರತ- ಚೀನಾದ ಮಧ್ಯೆ ಗಡಿ ವಿವಾದದ ಜೊತೆಗೇ, ಎನ್‌ಎಸ್‌ಜಿ ರಾಷ್ಟ್ರಗಳ ಗುಂಪಿಗೆ ಭಾರತದ ಸೇರ್ಪಡೆಯನ್ನು ಚೀನಾ ವಿರೋಧಿಸುತ್ತಿರುವುದು, ಪಾಕ್ ಮೂಲದ ಮಸೂದ್ ಅಝರ್ ಆಲಿಯನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸಲು ಚೀನಾ ಅಡ್ಡಿಯಾಗಿರುವುದು ಇತ್ಯಾದಿ ವಿವಾದಗಳೂ ಪ್ರಮುಖವಾಗಿದ್ದು ಈ ಕುರಿತೂ ಉಭಯ ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಈ ವಾರದ ಆರಂಭದಲ್ಲಿ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೀಜಿಂಗ್‌ಗೆ ಭೇಟಿ ನೀಡಿ, ಅಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆಯ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News