ಯುವ ಜನರ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುತ್ತಿರುವ ಸಂಘಪರಿವಾರದ ಕೋಮುವಾದಿಗಳು: ಮಾಜಿ ಕ್ರಿಕೆಟಿಗ ಅಝರುದ್ದೀನ್

Update: 2018-04-26 16:34 GMT

ಬೆಂಗಳೂರು, ಎ.26: ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನೈತಿಕ ಪೊಲೀಸ್‌ಗಿರಿ ಮಿತಿಮೀರಿದ್ದು, ಯುವ ಜನತೆ ಭಯಗ್ರಸ್ತರಾಗಿ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಂಸದ ಹಾಗೂ ಕ್ರಿಕೆಟ್ ಆಟಗಾರ ಮುಹಮ್ಮದ್ ಅಝರುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಯುವಕ-ಯುವತಿಯರು ಯಾವ ಉಡುಪು ಧರಿಸಬೇಕು. ಯಾರನ್ನು ಪ್ರೀತಿಸಬೇಕು, ಏನನ್ನು ತಿನ್ನಬೇಕು, ಏನನ್ನು ನೋಡಬೇಕು ಎಂಬುದನ್ನು ನೈತಿಕ ಪೊಲೀಸ್‌ಗಿರಿ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿರುವುದು ಪ್ರಜಾಪ್ರಭುತ್ವ ದೇಶದಲ್ಲಿ ಒಳ್ಳೆಯ ಲಕ್ಷಣವಲ್ಲವೆಂದು ಎಚ್ಚರಿಸಿದರು.

ನಮ್ಮ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಚ್ಛೆಗೆ ಅನುಸಾರವಾಗಿ ಬದುಕುವ ಹಕ್ಕಿದೆ. ಆದರೆ, ಸಂಘಪರಿವಾರದ ಕೋಮುವಾದಿಗಳು ಯುವ ಜನರ ಸ್ವಾತಂತ್ರದ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೂ ಪ್ರಜಾಪ್ರಭುತ್ವದಡಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಇವೆಲ್ಲವನ್ನು ನೋಡಿ ಮೌನವಹಿಸುವ ಮೂಲಕ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲೂ ಬಿಜೆಪಿ ಬೆಂಬಲಿತ ಸಂಘಟನೆಗಳು ಯುವಜನತೆಯ ಮೇಲೂ ದಾಳಿ ಮುಂದುವರೆಸಿವೆ. ಪ್ರೇಮಿಗಳ ದಿನಾಚರಣೆ ಆಚರಿಸುವ ಯುವಜನತೆಯ ಮೇಲೆ ಅಮಾನವೀಯವಾಗಿ ದಾಳಿ ನಡೆಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಕೋಮುವಾದಿಗಳ ಉಪಟಳದಿಂದಾಗಿ ಬೇಸತ್ತು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ. ಆ ಮೂಲಕ ಯುವಜನತೆಯ ಆಸೆ-ಅಕಾಂಕ್ಷೆಗಳನ್ನು ನಾಶ ಮಾಡುವ ಮೂಲಕ ತನ್ನ ಸ್ವಾರ್ಥ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಬಿಜೆಪಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ವ್ಯವಸ್ಥಿತವಾದ ಕಾರ್ಯತಂತ್ರಗಳನ್ನು ರೂಪಿಸಿವೆ. ಇದಕ್ಕೆ ರಾಜ್ಯದ ಜನತೆ ಅವಕಾಶ ಮಾಡಿಕೊಡಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News