ಫೇಸ್‌ಬುಕ್ ಸ್ಥಾಪಕ ಝುಕರ್‌ಬರ್ಗ್‌ಗೆ ಮಧ್ಯಪ್ರದೇಶ ಕೋರ್ಟ್‌ನಿಂದ ಸಮನ್ಸ್

Update: 2018-04-26 17:16 GMT

ಭೋಪಾಲ, ಎ.26: ತನ್ನ ವೆಬ್‌ಪೋರ್ಟಲ್‌ನಲ್ಲಿ ಪ್ರಸಾರವಾಗಿದ್ದ ಜಾಹೀರಾತಿಗೆ ತಡೆಯೊಡ್ಡಿ ಅನವಶ್ಯಕವಾಗಿ ತೊಂದರೆ ಕೊಟ್ಟಿದ್ದಾರೆ ಎಂದು ವೆಬ್‌ಪೋರ್ಟಲ್ ಮಾಲಕ ನೀಡಿದ ದೂರಿನನ್ವಯ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ಗೆ ಮಧ್ಯಪ್ರದೇಶದ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಸ್ವಪ್ನಿಲ್ ರಾಯ್ ಎಂಬ ವ್ಯಕ್ತಿ ನೀಡಿದ ದೂರಿನಲ್ಲಿ, ತನ್ನ ‘ದಿ ಟ್ರೇಡ್‌ಬುಕ್ಸ್’ ಎಂಬ ವೆಬ್‌ಪೇಜ್‌ನಲ್ಲಿ ತಾನು ಪ್ರಸಾರ ಮಾಡಿದ್ದ ಪಾವತಿ ಜಾಹೀರಾತನ್ನು ಮೂರು ದಿನ ಪ್ರಸಾರ ಮಾಡಿದ ಬಳಿಕ ಫೇಸ್‌ಬುಕ್ ತಡೆಯೊಡ್ಡಿದೆ. ತನ್ನ ವೆಬ್‌ಪೋರ್ಟಲ್‌ನ ಹೆಸರಿಗೆ ಆಕ್ಷೇಪ ಇರುವುದಾಗಿ ತನಗೆ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

2016ರ ಆಗಸ್ಟ್ 8ರಿಂದ 14ರವರೆಗೆ ಪ್ರಥಮ ಹಂತದ ಜಾಹೀರಾತು ಪ್ರಸಾರವಾಗಿತ್ತು. 2018ರ ಎಪ್ರಿಲ್ 14ರಿಂದ 21ರವರೆಗೆ ದ್ವಿತೀಯ ಹಂತದ ಜಾಹೀರಾತು ಪ್ರಸಾರವಾಗಲು ತಡೆಯೊಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎರಡನೇ ಹಂತದ ಜಾಹೀರಾತು ಪ್ರಸಾರವನ್ನು ಫೇಸ್‌ಬುಕ್ ಅಕ್ರಮವಾಗಿ ತಡೆಹಿಡಿದಿದೆ. ಎರಡನೇ ಹಂತದ ಜಾಹೀರಾತು ತನ್ನ ವೆಬ್‌ಫೋರ್ಟಲ್‌ನ ಅಭಿವೃದ್ಧಿಗೆ ಪೂರಕವಾಗಿತ್ತು. ಆದರೆ ತನ್ನ ವೆಬ್‌ಪೋರ್ಟಲ್‌ನ ಹೆಸರಿನ ಬಗ್ಗೆ ಆಕ್ಷೇಪ ಎತ್ತಲಾಗಿದ್ದು ಬುಕ್ ಎಂಬ ಪದವನ್ನು ತೆಗೆಯಬೇಕೆಂದು ಸೂಚಿಸಲಾಗಿದೆ. ಅಲ್ಲದೆ ಲೀಗಲ್ ನೋಟಿಸ್ ನೀಡಿ ತನಗೆ ಮಾನಸಿಕ ಪೀಡನೆ ನೀಡಲಾಗಿದೆ ಎಂದು ರಾಯ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೋಪಾಲ್ ಜಿಲ್ಲಾ ನ್ಯಾಯಾಲಯದ ಎಡಿಷನಲ್ ಸೆಷನ್ಸ್ ನ್ಯಾಯಾಧೀಶ ಪಾರ್ಥಶಂಕರ ಮಿಶ್ರ, ಸಮನ್ಸ್ ಅನ್ನು ಈಮೇಲ್ ಮೂಲಕ ಕಳಿಸುವಂತೆ ಆದೇಶ ಜಾರಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News