ಅತ್ಯಾಚಾರ ತಡೆಗೆ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ ಧರಣಿ

Update: 2018-04-26 18:04 GMT

ಬೆಂಗಳೂರು, ಎ.26: ಜಮ್ಮುವಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಸೂಕ್ತ ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಆಗ್ರಹಿಸಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದ ಪುರಭವನದ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಹ್ಯುಮನೈಸಿಂಗ್ ಇಂಡಿಯಾ ಸಂಘಟನೆ ವತಿಯಿಂದ ಶಾಂತಿನಗರದಿಂದ ಪುರಭವನದವರೆಗೂ ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ವೆುರವಣಿಗೆ ನಡೆಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ವಿದ್ಯಾರ್ಥಿನಿಯರಿಗೆ, ಯುವತಿಯರಿಗೆ, ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿಲ್ಲಿಯ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್, ದೇಶದಲ್ಲಿ ಎಲ್ಲ ಕಡೆ ಕಾನೂನು ಇದೆ. ಆದರೆ, ಜಮ್ಮು ಕಾಶ್ಮೀರದಲ್ಲಿ ಯಾಕೆ ಕಾನೂನುಗಳಿಲ್ಲ. ಇದರ ಹಿಂದಿರುವ ರಾಜಕೀಯವೇನು ಎಂದು ಪ್ರಶ್ನಿಸಿದರು.

ರೋಹಿಂಗ್ಯ ಮುಸ್ಲಿಮರು ವಲಸೆ ಬಂದಂತಹ ಸಂದರ್ಭದಲ್ಲಿ ಅವರ ಮೇಲೆ ಅತ್ಯಾಚಾರ ಮಾಡಿದರು. ಯಾವ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ದಿಲ್ಲಿಯಲ್ಲಿರುವ ಕೇಂದ್ರ ಸರಕಾರ ನಾವು ಅಪರಾಧಗಳನ್ನು ಸಹಿಸಲ್ಲ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದ ಅವರು, ಇದುವರೆಗೂ ದೇಶದಲ್ಲಿ ಎಷ್ಟು ಅಪರಾಧ ಪ್ರಕರಣಗಳನ್ನು ನೀವು ದಾಖಲು ಮಾಡಿಕೊಂಡಿದ್ದೀರಾ ಹಾಗೂ ಪರಿಹಾರ ನೀಡಿದ್ದೀರಾ ಎಂದು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರದ ಶಾಸಕ ಯುವತಿಯ ಮೇಲೆ ಅತ್ಯಾಚಾರ ನಡೆಸಿದರು. ಅನಂತರ ಈ ಕುರಿತು ದೂರು ನೀಡಿದರೂ ಪೊಲೀಸರು ಚಾರ್ಜ್‌ಶೀಟ್ ಮಾಡಲು ಮುಂದಾಗಲಿಲ್ಲ. ಅಲ್ಲದೆ, ಪೊಲೀಸ್ ಠಾಣೆಯಲ್ಲಿಯೇ ಶಾಸಕನ ಸಹೋದರ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಂದೆಯನ್ನು ಹತ್ಯೆ ಮಾಡಲಾಯಿತು. ಇದೇನಾ ಬಿಜೆಪಿ ಸರಕಾರದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕೈಗೊಳ್ಳುತ್ತಿರುವ ಕ್ರಮಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

 2017 ಜೂನ್‌ನಲ್ಲಿ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ಹೈಕೋರ್ಟ್ ನ್ಯಾಯಾಧೀಶ ಬಿಜೆಪಿ ನಾಯಕನ ವೆುೀಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ವೌನವಾಗಿದ್ದಾರೆ. ಸೂರತ್, ಛತ್ತೀಸ್‌ಘಡ್‌ನಲ್ಲಿ ದೌರ್ಜನ್ಯ, ಬಲಾತ್ಕಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲಿ ಯಾವ ಸರಕಾರಗಳಿವೆ ಎಂದ ಅವರು, ದೇಶದಲ್ಲಿ ಏನಾಗುತ್ತಿದೆ. ದೇಶವನ್ನಾಳಲು ಮುಂದಾಗಿರುವ ಸೇವಕ ಯಾಕೆ ಮೌನವಾಗಿದ್ದಾರೆ ಎಂದರು.

ಮಾನವೀಯ ಮೌಲ್ಯಗಳಿರುವ ದೇಶ ನಿರ್ಮಾಣ ಮಾಡಬೇಕಿದೆ. ಮಾನವತಾ ಭಾವುಟವನ್ನು ನಾವಿಂದು ಹಿಡಿದಿದ್ದೇವೆ. ಅದನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಬೇಕು. ಬುದ್ಧ, ಬಸವ, ಅಂಬೇಡ್ಕರ್, ಭಗತ್‌ಸಿಂಗ್ ಸೇರಿದಂತೆ ನೂರಾರು ಜನರು ಪ್ರತಿಪಾದಿಸಿದ ಸಮ ಸಮಾಜದ ದೇಶ ನಿರ್ಮಾಣ ಮಾಡಬೇಕಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಭೌದ್ಧ ಹಾಗೂ ದಲಿತ, ಹಿಂದುಳಿದ ಎಂಬ ಭೇದ-ಭಾವವಿಲ್ಲದೆ ಸಮಾನವಾದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕಾದ ಅಗತ್ಯವಿದೆ ಎಂದು ನುಡಿದರು.

ವಿದ್ಯಾರ್ಥಿನಿ ವೈಷ್ಣವಿ ಮಾತನಾಡಿ, ದೇಶದಲ್ಲಿ ಹೆಣ್ಣನ್ನು ತಾಯಿ ಎಂದು ಕರೆಯಲಾಗುತ್ತದೆ. ಆದರೆ, ಇಂದು 8 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಎನ್‌ಸಿಆರ್‌ಪಿ ವರದಿ ಪ್ರಕಾರ 2017 ರಲ್ಲಿ ದಿನಕ್ಕೆ 64 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಆದರೂ, ದಾಖಲಾಗದೇ ಉಳಿದ ಪ್ರಕರಣಗಳು ಎಷ್ಟು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟಕರಾದ ಅಗಾ, ವಿಕ್ಟರ್ ಲೋಗೋ, ದೇವರಾಜ ಅರಸು ಸಂಶೋಧನಾ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News