44 ಸಾವಿರ ನವಜಾತ ಶಿಶುಗಳ ಸಾವು : ಮುರುಳೀಧರ್ ರಾವ್

Update: 2018-04-26 18:29 GMT

ಬೆಂಗಳೂರು, ಎ. 26: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 44 ಸಾವಿರ ನವಜಾತ ಶಿಶುಗಳು ಮರಣಹೊಂದಿವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಹೊರ ತಂದಿರುವ ‘ಆರೋಗ್ಯ ಇಲಾಖೆಯೋ, ಸಾವಿನ ಕುಣಿಕೆಯೋ’ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ 21,370 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ದೂರಿದರು.

ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿರುವ ಮತ್ತು ನರಳುತ್ತಿರುವ ಮಕ್ಕಳ ಸಾವು ಪ್ರಮಾಣ ಹೆಚ್ಚಾಗಿದೆ. ಎಲ್ಲ ವಲಯಗಳಂತೆ ಆರೋಗ್ಯ ವಲಯದಲ್ಲಿ ರಾಜ್ಯ ಸರಕಾರ ವೈಫಲ್ಯ ಕಂಡಿದ್ದು, ಜನತೆ ರೋಗಗಳಿಂದ ನರಳುವಂತೆ ಮಾಡಿದೆ ಎಂದು ಮುರುಳೀಧರ್ ರಾವ್ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಇಂದಿನ ಮತ್ತು ಹಿಂದಿನ ಸ್ಥಿತಿಯ ಬಗ್ಗೆ ಚರ್ಚೆ ಬಿಟ್ಟು, ಯಾವುದೇ ವಿಷಯ ಪ್ರಸ್ತಾಪಿಸಿದರೂ ಬೇರೆ ರಾಜ್ಯಗಳ ಜೊತೆ ಹೋಲಿಕೆ ಮಾಡಿ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ವಿಷಯಾಂತರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ವೈದ್ಯರ ನೇಮಕಾತಿಯಿಂದ ಕಮಿಷನ್ ಸಿಗುವುದಿಲ್ಲ ಎಂದು ಈ ಬಗ್ಗೆ ಗಮನಹರಿಸದೆ ಒಳ್ಳೆ ಕಮಿಷನ್ ಸಿಗುವ ರಸ್ತೆ ಕಾಮಗಾರಿಗಳ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಹೆಚ್ಚಿನ ಆಸಕ್ತಿ ಎಂದು ಟೀಕಿಸಿದರು.

ಈ ವೇಳೆ ವೈದ್ಯಕೀಯ ಪ್ರಕೋಷ್ಟದ ಡಾ.ಬಸವರಾಜ್, ಡಾ.ನವೀನ್‌ಕುಮಾರ್, ಬಿಜೆಪಿ ಮುಖಂಡರಾದ ಆನಂದ್, ಶಾಂತಾರಾಮ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಅಹಿಂದ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನವೀಯತೆಯ ಶತ್ರುವಾಗಿದ್ದು, ರಾಜ್ಯದಲ್ಲಿನ 44 ಸಾವಿರ ನವಜಾತ ಶಿಶುಗಳ ಸಾವಿಗೆ ಅವರೇ ನೇರ ಕಾರಣ. ಕಾಂಗ್ರೆಸ್ ಸರಕಾರ ಸಾವನ್ನು ತಂದುಕೊಡುವ ಸರಕಾರ’
-ರವಿಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News