ಕೆಂಪುಕೋಟೆಯನ್ನು ದತ್ತು ಪಡೆದುಕೊಂಡ ದಾಲ್ಮಿಯಾ ಗ್ರೂಪ್

Update: 2018-04-28 17:19 GMT

ಹೊಸದಿಲ್ಲಿ, ಎ. 28: ದಿಲ್ಲಿಯ ಕೆಂಪು ಕೋಟೆಯನ್ನು ದಾಲ್ಮಿಯಾ ಭಾರತ್ ಗುಂಪು 25 ಕೋ. ರೂ. ಗುತ್ತಿಗೆಗೆ ಐದು ವರ್ಷಗಳಿಗೆ ದತ್ತು ಪಡೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಚಾರಿತ್ರಿಕ ಸ್ಮಾರಕವನ್ನು ದತ್ತು ತೆಗೆದುಕೊಂಡ ಮೊದಲ ಕಾರ್ಪೊರೇಟ್ ಸಂಸ್ಥೆಯಾಗಿ ದಾಲ್ಮೀಯ ಭಾರತ್ ಗುಂಪು ಹೊರಹೊಮ್ಮಿದೆ.

ಭಾರತ ಸರಕಾರದ ‘ಸ್ಮಾರಕ ದತ್ತು’ ಯೋಜನೆ ಅಡಿಯ ಹರಾಜಿನಲ್ಲಿ ಕೆಂಪು ಕೋಟೆಯನ್ನು ದಾಲ್ಮಿಯಾ ಭಾರತ್ ಗುಂಪು ಜಿಎಂಆರ್ ಗುಂಪು ಹಾಗೂ ಇಂಡಿಗೊ ಏರ್‌ಲೈನ್ಸ್ ಅನ್ನು ಹಿಂದಿಕ್ಕಿ ಗುತ್ತಿಗೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಬ್ಯುಸಿನಸ್ ಸ್ಟಾಂಡರ್ಡ್ ಹೇಳಿದೆ. ಕಳೆದ ವರ್ಷ ಸೆಪ್ಟಂಬರ್ 17ರಂದು ರಾಷ್ಟ್ರಪತಿ ಅವರು ‘ಸ್ಮಾರಕ ದತ್ತು’ ಯೋಜನೆ ಆರಂಭಿಸಿದ ಹಿನ್ನೆಲೆಯಲ್ಲಿ ಕೆಂಪು ಕೋಟೆಯನ್ನು ದತ್ತು ತೆಗೆದುಕೊಳ್ಳಲು ಹಲವು ಕಂಪೆನಿಗಳು ಮುಂದೆ ಬಂದಿದ್ದವು. ಗುತ್ತಿಗೆ ಪಡೆದುಕೊಂಡ ಬಳಿಕ ದಾಲ್ಮಿಯಾ ಭಾರತ್ ಗುಂಪು ಎಪ್ರಿಲ್ 9ರಂದು ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಹಾಗೂ ಭಾರತ ಪುರಾತತ್ವ ಸರ್ವೇಕ್ಷಾಣಾಲಯದೊಂದಿಗೆ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಿತು. ಎಪ್ರಿಲ್ 25ರಂದು ಈ ಒಪ್ಪಂದವನ್ನು ಪ್ರವಾಸೋದ್ಯಮ ಸಚಿವಾಲಯ ಬಹಿರಂಗಪಡಿಸಿತ್ತು. ತಿಳಿವಳಿಕಾ ಪತ್ರಕ್ಕೆ ಸಹಿ ಹಾಕುವ ಸಂದರ್ಭ ಕೇಂದ್ರ ಪ್ರವಾಸೋದ್ಯಮ ಖಾತೆಯ ಸಹಾಯಕ ಸಚಿವ ಕೆ.ಜೆ. ಅಲ್ಫೋನ್ಸಾ, ಪ್ರವಾಸೋದ್ಯಮ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು, ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು, ದಾಲ್ಮಿಯಾ ಭಾರತ್ ಗುಂಪಿನ ಆಡಳಿತ ನಿರ್ದೇಶಕ ಪುನೀತ್ ದಾಲ್ಮೀಯ ಉಪಸ್ಥಿತರಿದ್ದರು. ಸಂಸ್ಕೃತಿ ಸಚಿವಾಲಯ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಅನುಮತಿ ದೊರಕಿದ ಬಳಿಕ ಕೆಂಪು ಕೋಟೆಗೆ ಭೇಟಿ ನೀಡುವ ಸಂದರ್ಶಕರಿಗೆ ಶುಲ್ಕ ವಿಧಿಸಲಾಗುವುದು. ಇದರಿಂದ ಸಿಗುವ ಆದಾಯವನ್ನು ಕೆಂಪು ಕೋಟೆಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬಳಸಲು ನಿರ್ಧರಿಸಲಾಗಿದೆ. ರಾಜಧಾನಿಯನ್ನು ಆಗ್ರಾದಿಂದ ಈಗಿರುವ ದಿಲ್ಲಿಗೆ ರಾಜಧಾನಿಯನ್ನು ವರ್ಗಾಯಿಸಲು 5ನೇ ಮೊಗಲ್ ದೊರೆ ಶಾಹ್‌ಜಹಾನ್ 17ನೇ ಶತಮಾನದಲ್ಲಿ ಕೆಂಪು ಕೋಟೆ ನಿರ್ಮಿಸಿದ್ದರು.

ಆದರೆ ವಿಪಕ್ಷಗಳು ಹಾಗು ಇತಿಹಾಸಕಾರರು ಈ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಕಟ್ಟಡಗಳ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಕಂಪೆನಿಗಳಿಗೆ ವಹಿಸುವ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. “ಪಾರಂಪರಿಕ ತಾಣವನ್ನು ಲೀಸ್ ಗೆ ನೀಡಲು ಸರಕಾರಕ್ಕೆ ಅಧಿಕಾರ ಕೊಟ್ಟವರು ಯಾರು?, ಅವರು ಅದನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾದರೂ ಹೇಗೆ?” ಎಂದು ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್ ನ ಮೌಲಾನ ಮುಹಮ್ಮದ್ ಸಾಜಿದ್ ರಶೀದಾ ಪ್ರಶ್ನಿಸಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಕೇಂದ್ರ ಸರಕಾರ. “ಕೆಂಪುಕೋಟೆಯನ್ನು ದತ್ತು ಯೋಜನೆಯಡಿ ನೀಡಲಾಗಿದೆ ಹೊರತು ಅಲ್ಲಿ ಯಾವುದೇ ಲಾಭದಾಯಕ ಚಟುವಟಿಕೆಗಳು ನಡೆಯುವುದಿಲ್ಲ” ಎಂದಿದೆ.

ದಾಲ್ಮಿಯಾ ಭಾರತ್ ಗುಂಪಿನ ಜವಾಬ್ದಾರಿ ಏನು ?

ಕೆಂಪು ಕೋಟೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ನಿರ್ವಹಿಸುವ ಜವಾಬ್ದಾರಿ ದಾಲ್ಮಿಯಾ ಭಾರತ್ ಹೊಂದಲಿದೆ. ಗುತ್ತಿಗೆಯಂತೆ ಮುಂದಿನ 6 ತಿಂಗಳಲ್ಲಿ ದಾಲ್ಮಿಯಾ ಭಾರತ್ ಗುಂಪು ಕೆಂಪು ಕೋಟೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇದು ಕುಡಿಯುವ ನೀರು ಪೂರೈಸುವ ಯಂತ್ರ, ಬೆಂಚ್‌ನಂತಹ ಬೀದಿ ಪೀಠೋಪಕರಣ ಹಾಗೂ ಅಂಗಡಿಗಳ ಸಂಕೇತಗಳನ್ನು ಒದಗಿಸಬೇಕು. ಇದಲ್ಲದೆ ಒಂದು ವರ್ಷದಲ್ಲಿ ಹಲವು ಗುರಿಯಗಳನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಶೌಚಾಲಯಗಳನ್ನು ಮೇಲ್ದರ್ಜೆಗೆ ಏರಿಸಸುವುದು, ತ್ರಿಡಿ ನಕ್ಷೆಗಳನ್ನು ಅಳವಡಿಸುವುದು, ಕೆಂಪು ಕೋಟೆಯ ಕಾಲು ದಾರಿಗೆ ದೀಪಗಳನ್ನು ಹಾಗೂ ತಡೆಗಳನ್ನು ಅಳವಡಿಸುವುದು, ಮರು ಸ್ಥಾಪನಾ ಕಾರ್ಯ, 1000 ಚದರ ಅಡಿ ಸಂದರ್ಶಕರ ಸೌಲಭ್ಯ ಕೇಂದ್ರ ನಿರ್ಮಿಸುವುದು, ಕೆಂಪು ಕೋಟೆಯ ಒಳಗೆ ಹಾಗೂ ಹೊರಗಿನ ತ್ರಿಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಬ್ಯಾಟರಿ ಚಾಲಿತ ವಾಹನಗಳು, ಈ ವಾಹನಗಳ ಚಾರ್ಜಿಂಗ್ ಸ್ಟೇಶನ್‌ಗಳು ಹಾಗೂ ಕೆಫೆಟೇರಿಯ ್ನ ಆರಂಭಿಸುವುದನ್ನು ಒಳಗೊಂಡಿದೆ. ಎರಡು ವರ್ಷಗಳಲ್ಲಿ ಇನ್ನೂ ಕೆಲವು ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಇವುಗಳಲ್ಲಿ ಅಸದ್ ಬುರ್ಜ್ ಕೆಳಗಡೆ ವಸ್ತು ಪ್ರದರ್ಶನ ಮಳಿಗೆ ರೂಪಿಸುವುದು, ವರ್ಚುವಲಿ ರಿಯಾಲಿಟಿ ಆಧರಿತ ಸ್ಮಾರಕ ವಿವರಣೆ ನೀಡುವುದು, ಕಟ್ಟಡದ ಕಾಲು ಹಾದಿ ಹಾಗೂ ಪೂರ್ಣ ಕೆಂಪು ಕೋಟೆಯನ್ನು ಬೆಳಕಿನಿಂದ ಅಲಂಕರಿಸುವುದು ಹಾಗೂ ಇತರ ಸೌಲಭ್ಯಗಳು ಸೇರಿವೆ.

ದತ್ತು ತೆಗೆದುಕೊಂಡ ಸ್ಮಾರಕಗಳಲ್ಲಿ ಹಂಪಿ, ದಿಲ್ಲಿಯ ಕುತುಬ್ ಮಿನಾರ್, ಜಂತರ್ ಮಂತರ್, ಪುರಾನಾ ಖಿಲಾ, ಸಪ್ಧರ್‌ಜಂಗ್ ಸಮಾಧಿ ಹಾಗೂ ಅಗ್ರಿಸೇನ್ ಕಿ ಬಾವೋಲಿ; ಒರಿಸ್ಸಾದ ಸೂರ್ಯ ದೇವಾಲಯ, ರತ್ನಗಿರಿ ಸ್ಮಾರಕಗಳು ಹಾಗೂ ರಾಜರಾಣಿ ದೇವಾಲಯ, ಕರ್ನಾಟಕದ ಹಂಪಿಯ ಅವಶೇಷಗಳು, ಜಮ್ಮು ಹಾಗೂ ಕಾಶ್ಮೀರದ ಲೇಹ್ ಪ್ಯಾಲೇಸ್ ಹಾಗೂ ಸ್ಟೋಕ್ ಕಾಂಗ್ರಿ, ಮಹಾರಾಷ್ಟ್ರದ ಅಜಂತಾ-ಎಲ್ಲೋರಾ, ಕೊಚ್ಚಿಯ ಮಟ್ಟಂಚೇರಿ ಅರಮನೆ, ಉತ್ತರಾಖಂಡದ ಗಂಗೋತ್ರಿ ದೇವಾಲಯ ಹಾಗೂ ಗೋಮುಖ್ ಟ್ರೈಲ್ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News