ಏಮ್ಸ್ ಕಿರಿಯ ವೈದ್ಯರ ಮುಷ್ಕರ ಮೂರನೇ ದಿನಕ್ಕೆ

Update: 2018-04-28 14:36 GMT

ಹೊಸದಿಲ್ಲಿ,ಎ.28: ದಿಲ್ಲಿಯ ಏಮ್ಸ್‌ನ ಕಿರಿಯ ವೈದ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಶನಿವಾರ ಮೂರನೇ ದಿನಕ್ಕೆ ಕಾಲಿರಿಸಿದ್ದು,ವೈದ್ಯಕೀಯ ಸೇವೆಗಳು ವ್ಯತ್ಯಯಗೊಂಡು ರೋಗಿಗಳು ಪರದಾಡುವಂತಾಯಿತು. ರೋಗಿಗಳು ಮತ್ತು ಇತರ ಸಿಬ್ಬಂದಿಗಳ ಎದುರಿನಲ್ಲೇ ತಮ್ಮ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಹಿರಿಯ ವೈದ್ಯರನ್ನು ಅಮಾನತುಗೊಳಿಸಬೇಕೆಂದು ಮುಷ್ಕರನಿರತರು ಪಟ್ಟು ಹಿಡಿದಿದ್ದಾರೆ.

ದೈನಂದಿನ ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಲಾಗಿದ್ದು,ಹೊರರೋಗಿಗಳನ್ನು ವಾಪಸ್ ಕಳುಹಿಸಲಾಯಿತು. ತುರ್ತು ಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕಗಳು ಮಾತ್ರ ಕಾರ್ಯ ನಿರತವಾಗಿದ್ದವು.

ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ವಿಭಾಗ ಮುಖ್ಯಸ್ಥರೂ ಆಗಿರುವ ಹಿರಿಯ ವೈದ್ಯರು ಲಿಖಿತ ಕ್ಷಮೆಯಾಚನೆ ಪತ್ರವನ್ನು ಸಲ್ಲಿಸಿದ್ದು,ಆಂತರಿಕ ತನಿಖಾ ಸಮಿತಿಯ ನಿರ್ದೇಶದ ಮೇರೆಗೆ ರಜೆಯಲ್ಲಿ ತೆರಳಿದ್ದಾರೆ.

ಗುರುವಾರ ಸಂಜೆಯಿಂದಲೂ ಮುಷ್ಕರದಲ್ಲಿ ತೊಡಗಿಕೊಂಡಿರುವ ಕಿರಿಯ ವೈದ್ಯರು ಮುಷ್ಕರವನ್ನು ಹಿಂದೆಗೆದುಕೊಂಡು ಕರ್ತವ್ಯಕ್ಕೆ ಮರಳುವಂತೆ ಏಮ್ಸ್ ನಿರ್ದೇಶಕ ರಣದೀಪ ಗುಲೇರಿಯಾ ಅವರು ಮಾಡಿಕೊಂಡ ಮನವಿಗೆ ಕಿವಿಗೊಟ್ಟಿಲ್ಲ. ಹಿರಿಯ ವೈದ್ಯರನ್ನು ಅಮಾನತುಗೊಳಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಕಿರಿಯ ವೈದ್ಯರೋರ್ವರು ಸುದ್ದಿಗಾರರಿಗೆ ತಿಳಿಸಿದರು.

 ಹಿರಿಯ ವೈದ್ಯರಿಗೆ ನಿಡಲಾಗಿದ್ದ ಪದ್ಮಶ್ರೀ ಮತ್ತು ಡಾ.ಬಿ.ಸಿ.ರಾಯ್ ಪ್ರಶಸ್ತಿಗಳನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಕಿರಿಯ ವೈದ್ಯರ ಸಂಘವು ಏಮ್ಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News