ದೇಶವನ್ನು ಡಿಜಿಟಲ್ ಇಂಡಿಯಾದ ಬದಲು ಡ್ಯಾಮೇಜ್ ಇಂಡಿಯಾ ಮಾಡುತ್ತಿರುವ ಕೇಂದ್ರ ಸರಕಾರ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2018-04-28 15:21 GMT

ಬೆಂಗಳೂರು, ಎ.28: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ಡಿಜಿಟಲ್ ಇಂಡಿಯಾವನ್ನಾಗಿ ನಿರ್ಮಿಸದೆ, ಡ್ಯಾಮೆಜ್ ಇಂಡಿಯಾವನ್ನಾಗಿ ನಿರ್ಮಾಣ ಮಾಡುವತ್ತ ಸಾಗಿದೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.

ಶನಿವಾರ ಸಾಮಾಜಿಕ ನ್ಯಾಯದ ವೇದಿಕೆ ನಗರದ ಸೆನೆಟ್‌ನಲ್ಲಿ ಲೇಖಕಿ ಕಲೈ ಸೆಲ್ವಿ ಅವರ ‘ಸಂಚುಗಾರ ಸಂಘ ಪರಿವಾರ’ ಅನುವಾದ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತ್ಯಾಚಾರ ಪ್ರಕಾರಣದ ಆರೋಪಿಯ ಪರವಾಗಿ ಬಿಜೆಪಿ ನಾಯಕರು ರ್ಯಾಲಿ ನಡೆಸುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೆ ಅತ್ಯಾಚಾರದ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ. ಇಂತಹ ಮನಸ್ಥಿತಿ ಹೊಂದಿರುವ ಬಿಜೆಪಿ ನಾಯಕರಿಂದ ಡಿಜಿಟಲ್ ಇಂಡಿಯಾ ನಿರ್ಮಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.

ದಲಿತನೊಬ್ಬ ಕೈಗೆ ವಾಚ್ ಕಟ್ಟಿದ ಮಾತ್ರಕ್ಕೆ ಕೋಮುವಾದಿಗಳು ಆತನ ಕೈಯನ್ನೆ ಕತ್ತರಿಸಿದರು. ಮತ್ತೊಂದು ಪ್ರಕರಣದಲ್ಲಿ ದಲಿತ ಯುವಕ ಕುದುರೆ ಸವಾರಿ ಮಾಡಿದ್ದನ್ನು ಸಹಿಸದ ಮೇಲ್ಜಾತಿಗಳ ಮಂದಿ ಆ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದರು. ಹೀಗೆ ದಲಿತ, ಮಹಿಳೆ ಹಾಗೂ ಅಲ್ಪಸಂಖ್ಯಾತರ ಬದುಕನ್ನು ನಿರ್ಣಾಮ ಮಾಡುವುದಕ್ಕೇ ಕೋಮುವಾದಿಗಳು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ ಎಂದು ಅವರು ತಿಳಿಸಿದರು.

ದೇಶದ ಬಹುತೇಕ ನ್ಯಾಯಾಧೀಶರು ಹಿಂದುತ್ವದ ಪ್ರತಿಪಾದಕರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಧೀಶರ ಕೈಯಲ್ಲಿ ಸಂಘಪರಿವಾರದ ಪೆನ್ನುಗಳು ಕೆಲಸ ಮಾಡುತ್ತಿವೆ. ಎಲ್ಲ ಕ್ಷೇತ್ರದ ಅಧಿಕಾರವನ್ನು ಕೋಮುವಾದಿಗಳಿಗೆ ಬಿಟ್ಟು ಕೊಟ್ಟ, ದೇಶದಲ್ಲಿ ದಲಿತರಿಗೆ, ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವೆಂದು ಪ್ರತಿಭಟಿಸಿದರೆ ಯಾವುದೆ ಪ್ರಯೋಜನವಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.

ಆರೆಸ್ಸೆಸ್ ಸ್ಥಾಪನೆಗೊಂಡು ನೂರು ವರ್ಷಗಳಲ್ಲಿ ದೇಶದ ಬಹುಪಾಲು ರಾಜ್ಯವನ್ನು ಆಕ್ರಮಿಸಿದ್ದಾರೆ. ದಕ್ಷಿಣ ಭಾರತವನ್ನು ಆಕ್ರಮಿಸಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ದಲಿತ ಹಾಗೂ ಹಿಂದುಳಿದ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಈ ಬಾರಿಯ ವಿಧಾನಸಭಾ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಲು ಪಣತೊಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿ.ಟಿ.ರಾಜಶೇಖರ್ ‘ಸಂಚುಗಾರ ಸಂಘ ಪರಿವಾರ’ ಕೃತಿ ಬಿಡುಗಡೆ ಮಾಡಿದರು. ಈ ವೇಳೆ ಪತ್ರಕರ್ತ ಅಗ್ನಿ ಶ್ರೀಧರ್, ಲೇಖಕಿ ಸೌಮ್ಯಾ, ಕೃತಿಕಾರ್ತಿ ಕಲೈ ಸೆಲ್ವಿ, ಮಾಜಿ ಸಚಿವೆ ಲಲಿತಾ ನಾಯಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News