ಚೀನಾ-ಭಾರತ ಗಡಿಯಲ್ಲಿ ಶಾಂತಿಗೆ ಮೋದಿ, ಜಿನ್‌ಪಿಂಗ್ ಒತ್ತು

Update: 2018-04-28 17:50 GMT

ವುಹಾನ್ (ಚೀನಾ), ಎ. 28: ವಿವಾದಾತ್ಮಕ ಚೀನಾ-ಭಾರತ ಗಡಿಯಲ್ಲಿ ನೆಮ್ಮದಿಯನ್ನು ಕಾಯ್ದುಕೊಂಡು ಬರಲು ತಮ್ಮ ಸಶಸ್ತ್ರ ಪಡೆಗಳಿಗೆ ಮಾರ್ಗದರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ಧರಿಸಿದ್ದಾರೆ ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಲು ಅಗಾಧ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

‘‘ಈಗ ನೆಲೆಸಿರುವ ವಿಶ್ವಾಸ ನಿರ್ಮಾಣ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಉಭಯ ಸೇನೆಗಳಿಗೆ ಸೂಚಿಸುವ ಹೊಣೆಯನ್ನು ಭಾರತ ಮತ್ತು ಚೀನಾಗಳು ವಹಿಸಿಕೊಂಡಿವೆ’’ ಎಂದು ಭಾರತೀಯ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಶನಿವಾರ ತಿಳಿಸಿದರು.

ಮಧ್ಯ ಚೀನಾದ ಹುಬೇ ಪ್ರಾಂತದ ವುಹಾನ್ ನಗರದಲ್ಲಿ ಮೋದಿ ಮತ್ತು ಜಿನ್‌ಪಿಂಗ್ ನಡುವಿನ ಎರಡು ದಿನಗಳ ವಿಶೇಷ ಶೃಂಗಸಭೆಯ ಮುಕ್ತಾಯದ ಬಳಿಕ ಅವರು ಈ ಹೇಳಿಕೆ ನೀಡಿದರು.

‘‘ಭಾರತ-ಚೀನಾ ಗಡಿ ವಲಯಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವ ಮಹತ್ವವನ್ನು ಉಭಯ ನಾಯಕರು ಸಾರಿ ಹೇಳಿದರು. ವಿಶ್ವಾಸ ಮತ್ತು ಹೊಂದಾಣಿಕೆಯನ್ನು ಬೆಳೆಸುವ ಪ್ರಯತ್ನವಾಗಿ ಉಭಯ ಸೇನೆಗಳ ನಡುವಿನ ಸಂಪರ್ಕವನ್ನು ಬಲಗೊಳಿಸಲು ಅವರು ನಿರ್ಧರಿಸಿದರು’’ ಎಂದು ಭಾರತದ ವಿದೇಶ ಕಾರ್ಯದರ್ಶಿ ಹೇಳಿದರು.

ಚೀನಾದ ಉಪ ವಿದೇಶ ಸಚಿವ ಕಾಂಗ್ ಕ್ಸುವನ್‌ಯು ಗೋಖಲೆಯ ಮಾತುಗಳನ್ನು ಅನುಮೋದಿಸಿದರು.

‘‘ಸೇನೆ ಮತ್ತು ಭದ್ರತಾ ಸಂವಹನ ವ್ಯವಸ್ಥೆಗಳನ್ನು ವೃದ್ಧಿಸಲು ಉಭಯ ದೇಶಗಳು ನಿರ್ಧರಿಸಿವೆ’’ ಎಂದು ವುಹಾನ್ ವಿಮಾನ ನಿಲ್ದಾಣದಲ್ಲಿ ಚೀನಾದ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ ಹೇಳಿದರು.

ಸೇನಾ ಹಾಟ್‌ಲೈನೊಂದನ್ನು ಸ್ಥಾಪಿಸುವ ಸಾಧ್ಯತೆಯ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

ಡೋ ಕಾಲಾ ಬಿಕ್ಕಟ್ಟು ಚರ್ಚೆಯಾಗಲಿಲ್ಲ

 ಕಳೆದ ವರ್ಷ ಉಭಯ ದೇಶಗಳ ಸಂಬಂಧ ಹಳಸಲು ಕಾರಣವಾದ ಡೋ ಕಾಲಾ (ಚೀನಾ ಭಾಷೆಯಲ್ಲಿ ಡಾಂಗ್‌ಲಾಂಗ್) ಬಿಕ್ಕಟ್ಟಿನ ಕುರಿತು ಮೋದಿ ಮತ್ತು ಜಿನ್‌ಪಿಂಗ್ ಚರ್ಚೆ ನಡೆಸಿದರೆ ಎಂಬ ಬಗ್ಗೆ ಭಾರತದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆಯಾಗಲಿ, ಚೀನಾದ ಉಪ ವಿದೇಶ ಸಚಿವ ಕಾಂಗ್ ಕ್ಸುವನ್‌ಯು ಆಗಲಿ ಏನನ್ನೂ ಹೇಳಲಿಲ್ಲ.

ಆದಾಗ್ಯೂ, 3,488 ಕಿ.ಮೀ. ಉದ್ದದ ಗಡಿಯಲ್ಲಿ ಸಂಯಮ ವಹಿಸಬೇಕಾದ ಅಗತ್ಯವನ್ನು ಉಭಯ ನಾಯಕರು ಪ್ರಸ್ತಾಪಿಸಿದರು ಎಂಬ ಸೂಚನೆಯನ್ನು ಗೋಖಲೆ ಮತ್ತು ಕಾಂಗ್ ನೀಡಿದರು.

ಕಳೆದ ವರ್ಷ ಸಿಕ್ಕಿಂ ಗಡಿ ಸಮೀಪ ಏರ್ಪಟ್ಟ ಸೇನಾ ಬಿಕ್ಕಟ್ಟು ಪುನರಾವರ್ತನೆಯಾಗಬಾರದು ಎಂಬುದಾಗಿ ಉಭಯ ನಾಯಕರು ಭಾವಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News