ಸುಳ್ಳುಸುದ್ದಿ ಪ್ರಸಾರ: ಎರಡು ಟಿವಿ ಚಾನೆಲ್‌ಗಳ ವಿರುದ್ಧ ಎಫ್‌ಐಆರ್

Update: 2018-04-29 03:45 GMT

ಗಾಝಿಯಾಬಾದ್, ಎ.29: ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎರಡು ಟೆಲಿವಿಷನ್ ವಾಹಿನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗಾಝಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ) ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 ಜಿಡಿಎ ಉಪಾಧ್ಯಕ್ಷರ ವಿರುದ್ಧ ಎರಡು ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆಪಾದಿಸಿ, ಏಕಮುಖ ವರದಿಯನ್ನು ಹಿಂದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಆದಾಗ್ಯೂ ಸಮಾಚಾರ್ ಪ್ಲಸ್ ಮತ್ತು ನ್ಯೂಸ್ ವನ್ ಇಂಡಿಯಾ ಈ ಆರೋಪ ನಿರಾಕರಿಸಿವೆ. ಜಿಡಿಎ ಉಪಾಧ್ಯಕ್ಷ ರಿತು ಮಹೇಶ್ವರಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು. ಆಕೆ ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ ಎನ್ನುವುದು ಚಾನೆಲ್‌ಗಳ ವಾದ.

ತ್ರಿಲೋಕ್ ಅಗರ್‌ವಾಲ್ ಎಂಬವರು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿ, "ಅನಿಲ್ ಜೈನ್ ಎಂಬ ಬಿಲ್ಡರ್ ಅಕ್ರಮವಾಗಿ ನಿರ್ಮಿಸಿದ ಕಟ್ಟಡಕ್ಕೆ ಬೀಗಮುದ್ರೆ ಹಾಕುವುದನ್ನು ತಡೆಯಲು ಜಿಡಿಎ ಕಾರ್ಯದರ್ಶಿಗೆ 50 ಲಕ್ಷ ರೂ. ಲಂಚ ನೀಡಲಾಗಿದೆ. ಅಂತೆಯೇ ಕಾನೂನು ಜಾರಿ ಅಧಿಕಾರಿಗಳಿಗೂ ಇಷ್ಟೇ ಮೊತ್ತದ ಲಂಚ ಪಾವತಿಸಲಾಗಿದೆ" ಎಂದು ಹೇಳಿದ್ದರು.

ಈ ಸುದ್ದಿಗಳನ್ನು ಎರಡು ವಾಹಿನಿಗಳು ಪ್ರಸಾರ ಮಾಡಿದ್ದವು ಎಂದು ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ ಹೇಳಿದ್ದಾರೆ.

ಜಿಡಿಎ ಪರವಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ಸಿಂಗ್ ದೂರು ನೀಡಿದ್ದರು. ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವ, ಸರ್ಕಾರಿ ಪ್ರಾಧಿಕಾರದ ಘನತೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ದೂರಿದ್ದರು.

ಚಾನೆಲ್‌ಗಳ ಮುಖ್ಯ ಸಂಪಾದಕರು ಮತ್ತು ಸ್ಥಳೀಯ ವರದಿಗಾರರ ವಿರುದ್ಧ ಸಿಹಾನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾನೆಲ್‌ಗಳ ಈ ಕೃತ್ಯ ಬ್ಲ್ಯಾಕ್‌ಮೇಲ್ ಮನೋಭಾವದ್ದು ಮತ್ತು ಅಪರಾಧ ಸ್ವರೂಪದ್ದು ಎಂದು ಉಪಾಧ್ಯಕ್ಷೆ ರಿತು ಮಹೇಶ್ವರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News