ಸೂಪರ್‌ಸಾನಿಕ್ ಕ್ಷಿಪಣಿಯಾಗಲಿರುವ ಬ್ರಹ್ಮೋಸ್

Update: 2018-04-29 18:45 GMT

ಮುಂಬೈ, ಎ.29: ಭಾರತ ಮತ್ತು ರಶ್ಯಾದ ಜಂಟಿ ಸಹಯೋಗದಲ್ಲಿ ಸಿದ್ಧಗೊಂಡಿರುವ ವಿಶ್ವದ ಅತೀ ವೇಗದ ‘ಕ್ರೂಸ್’ ಕ್ಷಿಪಣಿ ಬ್ರಹ್ಮೋಸ್ ಒಂದು ದಶಕದ ಒಳಗೆ ಸೂಪರ್‌ಸಾನಿಕ್ ಕ್ಷಿಪಣಿಯಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮೋಸ್ ಕ್ಷಿಪಣಿ ಈಗ ಶಬ್ದದ ವೇಗಕ್ಕಿಂತ 2.8 ಪಟ್ಟು ಅಧಿಕ ವೇಗದಲ್ಲಿ ಸಾಗುತ್ತಿದ್ದು ಶೀಘ್ರದಲ್ಲೇ ಇದು ಶಬ್ದದ 3.5 ಪಟ್ಟು ವೇಗವನ್ನು ಪಡೆದುಕೊಳ್ಳಲಿದೆ. ಅಲ್ಲದೆ ಮುಂದಿನ 5 ವರ್ಷದೊಳಗೆ ಕ್ಷಿಪಣಿಯ ವೇಗವನ್ನು ಶಬ್ದದ 5 ಪಟ್ಟು ವೇಗಕ್ಕೆ ಹೆಚ್ಚಿಸಲಾಗುವುದು ಎಂದು ಜಂಟಿ ಸಹಯೋಗ ಸಂಸ್ಥೆ ಬ್ರಹ್ಮೋಸ್ ಏರೋಸ್ಪೇಸ್‌ನ ಮುಖ್ಯ ಅಧಿಕಾರಿ ಹಾಗೂ ಆಡಳಿತ ನಿರ್ದೇಶಕ ಸುಧೀರ್ ಮಿಶ್ರಾ ತಿಳಿಸಿದ್ದಾರೆ. ವಿಶ್ವದ ಅತ್ಯಂತ ವೇಗದ ಕ್ಷಿಪಣಿಯಾಗಿರುವ ಬ್ರಹ್ಮೋಸ್‌ನನ್ನು ಹೋಲುವ ಕ್ಷಿಪಣಿಯನ್ನು ಅಮೆರಿಕ ಕೂಡಾ ಹೊಂದಿಲ್ಲ ಎಂದು ಮಿಶ್ರ ಹೇಳಿದ್ದಾರೆ. ಮುಂದಿನ ತಲೆಮಾರಿನ ಯುದ್ಧ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಷಿಪಣಿಯನ್ನು ಸೂಪರ್‌ಸಾನಿಕ್ ಕ್ಷಿಪಣಿಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಭಾರತೀಯ ಸಂಸ್ಥೆಗಳಾದ ಡಿಆರ್‌ಡಿಒ, ಐಐಟಿಗಳು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು ಉದ್ದೇಶಿತ ಗುರಿ ಸಾಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದು ರಶ್ಯಾದ ಸಂಸ್ಥೆಗಳೂ ನೆರವಾಗುತ್ತಿವೆ ಎಂದವರು ತಿಳಿಸಿದ್ದಾರೆ. ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶೇ.55ರಷ್ಟು ಶೇರು ಹೊಂದಿದ್ದರೆ ಉಳಿದ ಶೇರುಗಳು ರಶ್ಯಾದ ಸಂಸ್ಥೆಯ ಬಳಿಯಿದೆ. ಕಳೆದ ಕೆಲ ವರ್ಷಗಳಲ್ಲಿ , ನೌಕೆ, ಸಬ್‌ಮೆರಿನ್, ಸುಖೋಯ್ -30 ವಿಮಾನ ಮುಂತಾದವುಗಳ ಮೂಲಕ ಉಡಾಯಿಸಲು ಸಾಧ್ಯವಾಗುವಂತೆ ಈ ಕ್ಷಿಪಣಿಯನ್ನು ಹಲವು ಬಾರಿ ಮಾರ್ಪಡಿಸಲಾಗಿದೆ. ಕ್ಷಿಪಣಿಯ ಇಂಜಿನ್, ಪ್ರೇಷಕ ವ್ಯವಸ್ಥೆ(ಮುಂದೂಡುವ ವ್ಯವಸ್ಥೆ)ಯನ್ನು ರಶ್ಯನ್ನರು ಅಭಿವೃದ್ಧಿಗೊಳಿಸಿದ್ದಾರೆ. ಕ್ಷಿಪಣಿಯ ನಿಯಂತ್ರಣಾ ವ್ಯವಸ್ಥೆ, ನಿರ್ದೇಶನಾ ವ್ಯವಸ್ಥೆ, ಸಾಫ್ಟ್‌ವೇರ್, ಅಗ್ನಿ ನಿಯಂತ್ರಕ ವ್ಯವಸ್ಥೆಯನ್ನು ಭಾರತೀಯ ಸಂಸ್ಥೆಗಳು ಅಭಿವೃದ್ಧಿಗೊಳಿಸಿವೆ. ಶೇ.70ಕ್ಕೂ ಹೆಚ್ಚಿನ ಬಿಡಿಭಾಗಗಳನ್ನು ಖಾಸಗಿ ಸಂಸ್ಥೆಗಳ ನೆರವಿನಿಂದ ಉತ್ಪಾದಿಸಲಾಗಿದೆ ಎಂದವರು ಹೇಳಿದ್ದಾರೆ.

ಆದರೆ ಯುದ್ಧರಂಗದಲ್ಲಿ ಕ್ಷಿಪಣಿಗಳು ಹೆಚ್ಚೆಂದರೆ ಮುಂದಿನ 30 ವರ್ಷಗಳವರೆಗೆ ಪ್ರಸ್ತುತವಾಗಿರುತ್ತದೆ. ಆ ಬಳಿಕ ಅತ್ಯಧಿಕ ಶಕ್ತಿಯ ಲೇಸರ್ ಕ್ಷಿಪಣಿ ಹಾಗೂ ಮೈಕ್ರೋವೇವ್ ಕ್ಷಿಪಣಿಗಳ ಕಾಲವಾಗಿರುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News