ಆಡಳಿತವನ್ನು ಪ್ರಶ್ನಿಸಿದರೆ ಉಗುರು ಕತ್ತರಿಸುತ್ತೇವೆ ಎಂದ ತ್ರಿಪುರಾ ಸಿಎಂ ವಿಪ್ಲವ್‍ದೇವ್

Update: 2018-05-02 09:00 GMT

ಹೊಸದಿಲ್ಲಿ,  ಮೇ 2: ವಿಪ್ಲವ್‍ದೇವ್ ತ್ರಿಪುರಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 50 ದಿನಗಳಲ್ಲಿ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದು, ಇದೀಗ ವಿವಾದ ಸರಣಿಗೆ ಹೊಸ ಘಟನೆ ಸೇರ್ಪಡೆಯಾಗಿದೆ.

ಅಗರ್ತಲದಲ್ಲಿ ನಡೆದ ನಾಗರಿಕ ಸೇವಾ ದಿನಾಚರಣೆಯಲ್ಲಿ ಅವರು ಮಾಡಿದ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. "ನನ್ನ ಸರ್ಕಾರ ಅಥವಾ ಸಾರ್ವಜನಿಕರ ಮೇಲೆ ಯಾರೂ ಕೈಯಾಡಿಸುವಂತಿಲ್ಲ. ವಿಪ್ಲವ್‍ದೇವ್ ಸರ್ಕಾರವಲ್ಲ. ಸಾರ್ವಜನಿಕರು ಸರ್ಕಾರ" ಎಂದು ಎಡಗೈ ಎತ್ತಿ ಸಾರ್ವಜನಿಕರತ್ತ ಬೆರಳು ಮಾಡುತ್ತಿರುವುದು ವಿಡಿಯೊ ತುಣುಕಿನಲ್ಲಿ ಕಂಡುಬರುತ್ತಿದೆ. 

"ನನ್ನ ಜನರ ಮೇಲೆ ಯಾರೂ ಕೈಯಾಡಿಸುವಂತಿಲ್ಲ. ನಾನು ಯುವಕನಿದ್ದಾಗ ಸರ್ಕಾರದ ಆಸ್ತಿಯನ್ನು ಯಾರು, ಏನು ಬೇಕಾದರೂ ಮಾಡಬಹುದು ಎಂದು ಜನ ಆಡಿಕೊಳ್ಳುತ್ತಿದ್ದರು. ತರಕಾರಿ ಮಾರಾಟಗಾರ ಮಾರುಕಟ್ಟೆಗೆ ಎಂಟು ಗಂಟೆಗೆ ಸೋರೆಕಾಯಿ ತರುತ್ತಾನೆ. 9 ಗಂಟೆಯ ವೇಳೆಗೆ ಅದರ ಮೇಲೆ ಸಾಕಷ್ಟು ಉಗುರು ಗುರುತುಗಳಿರುತ್ತವೆ. ಅದನ್ನು ಮಾರಾಟ ಮಾಡಲಾಗದ ಸ್ಥಿತಿ ಉಂಟಾಗುತ್ತದೆ. ನೀವು ಅದನ್ನು ದನಕ್ಕೆ ಹಾಕಬೇಕು ಅಥವಾ ಮನೆಗೆ ಮರಳಿ ಒಯ್ಯಬೇಕು. ಆದರೆ ಸರ್ಕಾರ ಹಾಗಾಗಬಾರದು. ಯಾರೂ ತಮ್ಮ ಉಗುರು ಗುರುತು ಮೂಡಿಸುವಂತಿಲ್ಲ. ಯಾರು ಇಂಥ ಗುರುತು ಮೂಡಿಸಲು ಪ್ರಯತ್ನಿಸುತ್ತಾರೋ ಅವರ ಉಗುರು ಕತ್ತರಿಸುತ್ತೇವೆ" ಎಂದು ವಿಪ್ಲವ್ ಹೇಳುತ್ತಿರುವುದು ದಾಖಲಾಗಿದೆ.

ಕಳೆದ ವಾರ ಡಯಾನಾ ಹೇಡನ್ ವಿಶ್ವಸುಂದರಿಯಾಗಿರುವುದನ್ನು ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೂ ಮುನ್ನ ವಿಪ್ಲವ್‍ದೇವ್ ಮಹಾಭಾರತ ಕಾಲದಲ್ಲೇ ಇಂಟರ್‍ನೆಟ್ ಹಾಗೂ ಉಪಗ್ರಹ ಸಂವಹನ ವ್ಯವಸ್ಥೆ ಬಳಕೆಯಲ್ಲಿತ್ತು ಎಂದು ಹೇಳುವ ಮೂಲಕ ಪಕ್ಷಕ್ಕೆ ಮುಜುಗರ ಮೂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News