ರೈತ ಪರ ಪ್ರಣಾಳಿಕೆ ಅಳವಡಿಸಿಕೊಂಡವರಿಗೆ ಮತ: ಕುರುಬೂರು ಶಾಂತಕುಮಾರ್

Update: 2018-05-02 12:51 GMT

ಬೆಂಗಳೂರು, ಮೇ 2: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸಿದ್ಧಪಡಿಸಿದ ಪ್ರಣಾಳಿಕೆಗೆ ಬೆಂಬಲ ನೀಡುವ ಪಕ್ಷಕ್ಕೆ ಮತ ಹಾಕುವಂತೆ ಮೇ 3ರಿಂದ ಬೈಕ್ ರ‍್ಯಾಲಿ ಮಾಡಲಾಗುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒಟ್ಟು 16 ಅಂಶಗಳ ಪ್ರಣಾಳಿಕೆ ಸಿದ್ಧಪಡಿಸಿದೆ. ರಾಜ್ಯದಲ್ಲಿ ರೈತರ ಪರವಾಗಿ ಸ್ಪಂದಿಸುವ ಸರಕಾರಕ್ಕೆ ನಮ್ಮ ಸಂಘಟನೆ ಬೆಂಬಲ ನೀಡಲಿದೆ. ಯಾವ ಪಕ್ಷದ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಹೋಲಿಕೆಯಾಗುತ್ತದೆಯೋ ಅದಕ್ಕೆ ಮತ ಹಾಕುವಂತೆ ರಾಜ್ಯದ ರೈತರಲ್ಲಿ ಅರಿವು ಮೂಡಿಸಲಾಗುವುದು. ಇದಕ್ಕಾಗಿ ಮೈಸೂರು, ಚಾಮರಾಜನಗರ, ಹುಬ್ಬಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೈಕ್ ರ‍್ಯಾಲಿ ನಡೆಸಲಾಗುವುದು ಎಂದರು.

ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುವ ಪ್ರಣಾಳಿಕೆ ಬಗ್ಗೆ ಚುನಾವಣೆ ಆಯೋಗ ಹದ್ದಿನ ಕಣ್ಣಿಡಬೇಕು. ಮತದಾರರಿಗೆ ಹುಸಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸದೆ ರಾಜಕಾರಣಿಗಳು ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ದೂರಿದರು.

ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಕನಿಷ್ಟ ಬೆಂಬಲ ಬೆಲೆ ನೀಡಿ ಸರಕಾರವೇ ಖರೀದಿಸಬೇಕು. ರೈತರ ಕೃಷಿ ಸಾಲ ಎಲ್ಲ ಬ್ಯಾಂಕುಗಳಲ್ಲಿಯೂ ಸಂಪೂರ್ಣ ಮನ್ನಾ ಮಾಡಬೇಕು. ಪ್ರಧಾನಮಂತ್ರಿ ಸಲ್ ಬಿಮಾ ಬೆಳೆ ವಿಮೆ ಬದಲಾಯಿಸಿ ಪ್ರತಿ ರೈತರ ಹೋಲದ ಬೆಳೆ ವಿಮೆ ಜಾರಿಗೊಳಿಸಬೇಕು. ಎಲ್ಲ ಬೆಳೆಗಳಿಗೂ ಎಲ್ಲ ಪ್ರದೇಶಗಳಿಗೂ ಜಾರಿಗೊಳಿಸಿ ಬೆಳೆ ನಷ್ಟ ಪರಿಹಾರ ಕೊಡಿಸಬೇಕು.

ರೈತಪರ ಹೋರಾಟ ಮಾಡಿದ ರೈತ ಕಾರ್ಯಕರ್ತರ ಮೇಲಿನ ಎಲ್ಲ ಪೊಲೀಸ್ ಮೊಕದ್ದಮೆಗಳನ್ನು ಅಧಿಕಾರಕ್ಕೆ ಬಂದ 1 ತಿಂಗಳನಲ್ಲಿ ವಾಪಸ್ ಪಡೆಯಬೇಕು. ಕಲೆ, ಸಾಹಿತ್ಯ, ನಾಟಕ, ಸಿನಿಮಾರಂಗದವರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಾಮಕರಣಗೊಳಿಸುವಂತೆ ರೈತರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಾಮಕರಣಗೊಳಿಸಬೇಕು. ವಿವಿಗಳಲ್ಲಿ ನೀಡುವ ಡಾಕ್ಟರೇಟ್ ಪದವಿಗಳನ್ನು ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ನೀಡಬೇಕು. ಮಹದಾಯಿ ನದಿ ನೀರಿನ ವಿವಾದ ಬಗೆಹರಿಸಬೇಕು. ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಸಂಪೂರ್ಣ ಸ್ವಾಯತತ್ತೆ ದೊರಕಿಸಿ ಕೊಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಉತ್ತಮ ಗುಣಮಟ್ಟದ 12 ಹಗಲಿನಲ್ಲಿ 12 ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು. ಎಲ್ಲ ರೈತರಿಗೆ ಆರೋಗ್ಯವಿಮೆ, ವೈದ್ಯಕೀಯ ವೆಚ್ಚಗಳನ್ನು ಸರಕಾರವೇ ಭರಿಸಬೇಕು. ಮಳೆಹಾನಿ, ಪ್ರಾಣಿಗಳ ಹಾವಳಿ, ಆಕಸ್ಮಿಕ ಬೆಂಕಿ, ಪ್ರಕೃತಿ ವಿಕೋಪ, ಬೆಳೆನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಗೊಳಿಸಿ, ನಷ್ಟ ಪರಿಹಾರ ಮಾಡಬೇಕು ಸೇರಿದಂತೆ ಹಲವು ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News