ದೇಶ ಲೂಟಿ ಮಾಡುತ್ತಿದ್ದಾಗ ಎಲ್ಲಿಗೆ ಹೋಗಿದ್ರಿ ? ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

Update: 2018-05-02 15:13 GMT

ಹುಬ್ಬಳ್ಳಿ, ಮೇ 2: ಪ್ರಧಾನಿ ನರೇಂದ್ರಮೋದಿ ಕಾವಲುಗಾರನಾಗಿ ದೇಶ ಕಾಯುತ್ತೇನೆ ಎಂದಿದ್ದರು. ಆದರೆ, ನೀರವ್ ಮೋದಿ, ಲಲಿತ್ ಮೋದಿ ಸೇರಿದಂತೆ ಇನ್ನಿತರರು ದೇಶವನ್ನು ಲೂಟಿ ಮಾಡುತ್ತಿದ್ದಾಗ ಎಲ್ಲಿಗೆ ಹೋಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮದು 10 ಪರ್ಸೆಂಟ್ ಸರಕಾರ ಎಂದು ಟೀಕಿಸುತ್ತೀರಾ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದೀರಾ? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನು ಭ್ರಷ್ಟ ಎಂದು ಕರೆದಿದ್ದೀರಿ. ನನ್ನ ವಿರುದ್ಧ ಒಂದು ದಾಖಲೆಯಾದರೂ ನಿಮ್ಮ ಬಳಿ ಇದೆಯಾ? ನೀವು ಹೇಳುತ್ತಿರುವ ಈ ಸುಳ್ಳು ಹೇಳಿಕೆಗಳಿಗೆ ಜನರೇ ಸೂಕ್ತ ಉತ್ತರ ನೀಡುತ್ತಾರೆ. ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಚೇ ದಿನ್ ಮೋದಿಯವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ಒಡಕಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ನಮಗೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನ ಸಿಗುತ್ತಿದೆ. ನಮ್ಮ ಯೋಜನೆಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಈ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರೆ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿಯ ಸಂತೋಷ್, ಅನಂತ್‌ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿ ಯಡಿಯೂರಪ್ಪ ಮಗ ವಿಜಯೇಂದ್ರಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ತಪ್ಪಿಸಿದ್ದಾರೆ. ಆತ ಕ್ಷೇತ್ರದಲ್ಲಿ ಮನೆ ಮಾಡಿ, ಒಂದು ತಿಂಗಳು ಪ್ರಚಾರ ಮಾಡಿದ್ದ, ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದಿದ್ದರೆ ವಿಜಯೇಂದ್ರಗೆ ಟಿಕೆಟ್ ತಪ್ಪುತ್ತಿತ್ತೇ? ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪಗೆ ಸಾಧ್ಯವಾಗಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಈ ವಿಧಾನಸಭೆ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಧರ್ಮ, ಜಾತಿ , ಹಿಂದುತ್ವ ಚುನಾವಣೆಯ ಚರ್ಚಾ ವಿಷಯಗಳಲ್ಲ. ಇವತ್ತು ಅಭಿವೃದ್ಧಿ ವಿಷಯಗಳು ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಚ್ಚಾರಿತ್ರ್ಯವನ್ನು ಹೊಂದಿರುವವರು ಜೈಲಿಗೆ ಏಕೆ ಹೋದರು? ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಗೆ ಸಂಸದೀಯ ಭಾಷೆಯೆ ಗೊತ್ತಿಲ್ಲ. ಅವರದ್ದು ಹೊಲಸು ನಾಲಿಗೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ಹಿಂದೆ ಐದು ವರ್ಷಗಳ ಕಾಲ ಬಿಜೆಪಿಯವರು ಯಾವ ರೀತಿ ಅಧಿಕಾರ ನಡೆಸಿದರು ಎಂಬುದನ್ನು ಸ್ಮರಿಸಿಕೊಳ್ಳಿ. ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಹುಬ್ಬಳ್ಳಿಗೆ ನೀಡಿದ ಕೊಡುಗೆ ಏನು? ಇಲ್ಲಿ ಹೊಟೇಲ್ ಹಾಗೂ ಆಸ್ತಿಗಳನ್ನು ಮಾಡಿದ್ದು ಬಿಟ್ಟರೆ ಹುಬ್ಬಳ್ಳಿಗೆ ಅವರ ಕೊಡುಗೆ ಏನು ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ನಿಮ್ಮ ಆಶೀರ್ವಾದ ಪಡೆದು ಯಾವ ಕೆಲಸವನ್ನು ಮಾಡದವರಿಗೆ ನೀವು ಮತ ನೀಡಬೇಡಿ. ಈ ಬಾರಿ ಡಾ.ಮಹೇಶ್ ನಾಲವಾಡಗೆ ಮತ ನೀಡಿದೆ. ದುಡಿಯುವ ಎತ್ತಿಗೆ ಮತ ನೀಡಿ, ಕಳ್ಳ ಎತ್ತಿಗೆ ಮತ ನೀಡಿ ವ್ಯರ್ಥ ಮಾಡಬೇಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News