ದಕ್ಷಿಣ ಕೊರಿಯದಲ್ಲಿ ಅಮೆರಿಕ ಸೈನಿಕರ ಮುಂದುವರಿಕೆ

Update: 2018-05-02 16:43 GMT

ಸಿಯೋಲ್, ಮೇ 2: ಭವಿಷ್ಯದಲ್ಲಿ ಉತ್ತರ ಕೊರಿಯದೊಂದಿಗೆ ಮಾಡಿಕೊಳ್ಳಲಾಗುವ ಯಾವುದೇ ಒಪ್ಪಂದಕ್ಕೂ ದಕ್ಷಿಣ ಕೊರಿಯದಲ್ಲಿ ಅಮೆರಿಕನ್ ಸೈನಿಕರು ಇರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಕ್ಷಿಣ ಕೊರಿಯ ಬುಧವಾರ ಹೇಳಿದೆ. ಉತ್ತರ ಕೊರಿಯದೊಂದಿಗೆ ಯಾವುದೇ ಒಪ್ಪಂದ ಏರ್ಪಟ್ಟರೂ ಅಮೆರಿಕದ ಸೈನಿಕರು ದಕ್ಷಿಣ ಕೊರಿಯದಲ್ಲಿ ಉಳಿಯುತ್ತಾರೆ ಎಂದು ಅದು ಸ್ಪಷ್ಟಪಡಿಸಿದೆ.

‘‘ದಕ್ಷಿಣ ಕೊರಿಯದಲ್ಲಿ ಅಮೆರಿಕದ ಸೈನಿಕರು ಇರುವ ವಿಷಯ ದಕ್ಷಿಣ ಕೊರಿಯ ಮತ್ತು ಅಮೆರಿಕಗಳ ನಡುವಿನ ಮೈತ್ರಿಗೆ ಸಂಬಂಧಿಸಿದ ವಿಷಯವಾಗಿದೆ. ಉತ್ತರ ಕೊರಿಯದ ಜೊತೆಗಿನ ಸಂಭಾವ್ಯ ಶಾಂತಿ ಒಪ್ಪಂಗಳಿಗೂ ಅದಕ್ಕೂ ಸಂಬಂಧವಿಲ್ಲ’’ ಎಂದು ದಕ್ಷಿಣ ಕೊರಿಯದ ಅಧ್ಯಕ್ಷರ ನಿವಾಸ ‘ಬ್ಲೂ ಹೌಸ್’ನ ವಕ್ತಾರರೊಬ್ಬರು ಅಧ್ಯಕ್ಷ ಮೂನ್ ಜೇ-ಇನ್‌ರನ್ನು ಉಲ್ಲೇಖಿಸಿ ಹೇಳಿದರು.

ದಕ್ಷಿಣ ಕೊರಿಯದ ಅಧ್ಯಕ್ಷೀಯ ಸಲಹೆಗಾರ ಹಾಗೂ ಶಿಕ್ಷಣತಜ್ಞ ಮೂನ್ ಚುಂಗ್-ಇನ್ ಬರೆದ ಪತ್ರಿಕಾ ಅಂಕಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.

ಕೊರಿಯ ಸಂಘರ್ಷವನ್ನು ಕೊನೆಗೊಳಿಸಲು ಉಭಯ ಕೊರಿಯಗಳ ನಾಯಕರು ಕಳೆದ ಶುಕ್ರವಾರ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡ ಬಳಿಕ, ಶಾಂತಿ ಒಪ್ಪಂದವೊಂದು ಏರ್ಪಡುವುದಾದರೆ, ದಕ್ಷಿಣ ಕೊರಿಯದಲ್ಲಿ ಅಮೆರಿಕದ ಸೈನಿಕರ ಉಪಸ್ಥಿತಿಯನ್ನು ಸಮರ್ಥಿಸುವುದು ಕಷ್ಟವಾಗುತ್ತದೆ ಎಂಬುದಾಗಿ ಮೂನ್-ಚುಂಗ್ ಬರೆದಿದ್ದರು.

ಪ್ರಸಕ್ತ ದಕ್ಷಿಣ ಕೊರಿಯದಲ್ಲಿ 28,500 ಅಮೆರಿಕನ್ ಸೈನಿಕರಿದ್ದಾರೆ. ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ತೊರೆಯಬೇಕಾದರೆ ಅಮೆರಿಕದ ಸೈನಿಕರು ವಾಪಸಾಗಬೇಕು ಎಂಬುದಾಗಿ ಉತ್ತರ ಕೊರಿಯ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News