ಕರುಣಾಳು ಬಾ ಬೆಳಕೆ...

Update: 2018-05-03 05:36 GMT

ಕಳೆದ ಐದು ದಶಕಗಳಲ್ಲಿ ಏಕಾಏಕಿ ಬಡವರ ಸಂಖ್ಯೆ ಇಳಿಮುಖಗೊಂಡಿತು. ಅಥವಾ ಸರಕಾರ ಹಾಗೆ ಘೋಷಿಸಿಕೊಂಡಿತು. ಇದರ ಅರ್ಥ ಬಡವರು ಇಲ್ಲವಾದರು ಎಂದಲ್ಲ. ಬದಲಿಗೆ ಬಡವರೆಂದು ಗುರುತಿಸಲು ಸರಕಾರ ಅನುಸರಿಸುವ ಮಾನದಂಡವನ್ನು ಬದಲಿಸಿತು. ಉದಾಹರಣೆಗೆ ದಿನಕ್ಕೆ 30 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವನು ಬಡವ ಎಂದು ಸರಕಾರ ಗುರುತಿಸಿ ಆತನಿಗೆ ಬಿಪಿಎಲ್ ಕಾರ್ಡ್ ನೀಡಿದರೆ, ದಿನಕ್ಕೆ 20 ರೂಪಾಯಿಗಿಂತ ಮೇಲೆ ತಲಾ ಆದಾಯ ಹೊಂದಿದರೆ ಆತ ಬಡತನ ರೇಖೆಗಿಂತ ಮೇಲಿದ್ದಾನೆ ಎಂದು ನಿಯಮವನ್ನು ಬದಲಿಸುವುದು. ಸಹಜವಾಗಿಯೇ ಬಡವರ ಸಂಖ್ಯೆ ದಾಖಲೆಗಳಲ್ಲಿ ಇಳಿಮುಖವಾಗುತ್ತದೆ.

ಬಡವನ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಬದಲು ಬಡವನನ್ನು ಗುರುತಿಸುವ ಮಾನದಂಡವನ್ನೇ ಬದಲಿಸುವ ಮೂಲಕ ಬಡವರ ಸಂಖ್ಯೆಯನ್ನು ಇಳಿಮುಖಗೊಳಿಸುವುದು. ಸದ್ಯಕ್ಕೆ ದೇಶ ಬಡವರನ್ನು ಇಲ್ಲವಾಗಿಸಲು ಅನುಸರಿಸುತ್ತಿರುವ ತಂತ್ರ ಇದು. ಇತ್ತೀಚೆಗೆ ನರೇಂದ್ರ ಮೋದಿಯವರು ''ದೇಶದ ಜನವಸತಿ ಇರುವ ಎಲ್ಲ ಹಳ್ಳಿಗಳ ವಿದ್ಯುದೀಕರಣ ಸಂಪೂರ್ಣಗೊಂಡಿದೆ'' ಎಂದು ಘೋಷಿಸಿದ್ದಾರೆ. ಅಂದರೆ ಅದರ ಅರ್ಥ ಇಡೀ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕವಾಯಿತು ಎಂದು ಸಂತೋಷಪಟ್ಟರೆ ನಾವು ಮೋಸ ಹೋಗಿದ್ದೇವೆ ಎಂದು ಅರ್ಥ. ಇದೊಂದು ಸಾಂಕೇತಿಕ ಹೇಳಿಕೆಯೇ ಹೊರತು, ಇಡೀ ದೇಶ ಕತ್ತಲೆಯಿಂದ ಮುಕ್ತವಾಗಿದೆ ಎಂದರ್ಥವಲ್ಲ ಮತ್ತು ಭಾರತದಂತಹ ಹಳ್ಳಿ ಪ್ರಧಾನ ದೇಶದಲ್ಲಿ ಅದು ಸುಲಭವೂ ಅಲ್ಲ. ಇದೊಂದು ರೀತಿಯಲ್ಲಿ ಅಂಕಿ ಸಂಖ್ಯೆಗಳ ಮಾಯೆ ಮಾತ್ರ.

ಸರಕಾರ ಪ್ರಕಟಿಸಿರುವ ಯೋಜನೆ ಸುಲಭ ಸಾಧ್ಯವಲ್ಲವೆಂಬುದನ್ನು ಮೂರು ಅಂಶಗಳು ಎತ್ತಿ ತೋರಿಸುತ್ತವೆ. ಮೊದಲನೆಯದಾಗಿ ಒಂದು ಹಳ್ಳಿಯಲ್ಲಿರುವ ಒಟ್ಟು ಮನೆಗಳಲ್ಲಿ ಕನಿಷ್ಠ ಶೇ. 10ರಷ್ಟು ನಿವಾಸಗಳಿಗಾದರೂ ವಿದ್ಯುತ್ ಸಂಪರ್ಕವಿದ್ದಲ್ಲಿ ಮತ್ತು ಶಾಲೆಗಳು, ಪಂಚಾಯತ್ ಕಚೇರಿಗಳು, ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಇದ್ದಲ್ಲಿ ಮಾತ್ರ ಒಂದು ಹಳ್ಳಿಯ ವಿದ್ಯುದೀಕರಣ ಪೂರ್ಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಆ ಹಳ್ಳಿಗೆ ಸರಕಾರದ ಪ್ರಕಾರ ನೂರು ಶೇ. ವಿದ್ಯುತ್ ನೀಡಲಾಗಿದೆ. ಆದರೆ ಇನ್ನೂ ಕೂಡ 31 ಮಿಲಿಯ ಮನೆಗಳಿಗೆ ವಿದ್ಯುತ್ ಸಂಪರ್ಕವಾಗಿಲ್ಲ ಎನ್ನುವುದನ್ನು ಅಂಕಿಅಂಶಗಳು ಘೋಷಿಸುತ್ತವೆ. ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಮ್‌ನಂತಹ ರಾಜ್ಯಗಳಲ್ಲಿ ಶೇ. 50 ರಷ್ಟು ಮನೆಗಳಿಗೆ ಇನ್ನೂ ಬೆಳಕು ಬಂದಿಲ್ಲ. ಎಲ್ಲರಿಗೂ ವಿದ್ಯುತ್ ಎಂಬ ಆಶ್ವಾಸನೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಆನಂತರದ ಸ್ಥಿತಿ ಇದು. ಮೂವತ್ತು ರಾಜ್ಯಗಳ ಪೈಕಿ 12 ರಾಜ್ಯಗಳಲ್ಲಿ ಇನ್ನೂ ಶೇ. 25ರಷ್ಟು ಮನೆಗಳಿಗೆ ವಿದ್ಯುತ್ ನೀಡಬೇಕಾಗಿದೆ.

ಹೀಗಿರುವಾಗ ಮಾರ್ಚ್ 2019ರ ವೇಳೆಗೆ ದೇಶದ ಎಲ್ಲ ಮನೆಗಳಿಗೆ ತಡೆರಹಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಮೋದಿ ಹೇಳಿದರೆ ಅದನ್ನು ನಂಬುವುದಾದರೂ ಹೇಗೆ? ಇಷ್ಟಕ್ಕೂ ಸಂಪೂರ್ಣ ವಿದ್ಯುದೀಕರಣಗೊಳಿಸುವುದು ನಿರಂತರವಾದ ಪ್ರಕ್ರಿಯೆ. ಈ ದೇಶ ಸ್ವಾತಂತ್ರಗೊಂಡಾಗ ಅದು ಸಂಪೂರ್ಣ ಕತ್ತಲಲ್ಲಿತ್ತು. ಶೇ. 5ರಷ್ಟು ಮನೆಗಳೂ ಬೆಳಕನ್ನು ಕಂಡಿರಲಿಲ್ಲ. ನೆಹರೂ ಅವರ ಅಭಿವೃದ್ಧಿಯ ಕಲ್ಪನೆಯ ಪರಿಣಾಮವಾಗಿ ಮತ್ತು ಅದರ ಆನಂತರದ ಬೇರೆ ಬೇರೆ ಪ್ರಧಾನಿಗಳು ಹಾಕಿಕೊಂಡ ಯೋಜನೆಯ ಪರಿಣಾಮವಾಗಿ ಹಳ್ಳಿಗಳು ಹಂತಹಂತವಾಗಿ ಬೆಳಕನ್ನು ಕಾಣುತ್ತಾ ಹೋಯಿತು. ಇಂದು ಪ್ರಧಾನಿ ಮೋದಿ ಅವೆಲ್ಲದರ ಹಿರಿಮೆಯನ್ನು ತನ್ನ ಜೇಬಿಗೆ ಹಾಕಲು ಹೊರಟಿದ್ದಾರೆ. ಅಂದರೆ ಮೋದಿ ಅಧಿಕಾರಕ್ಕೆ ಬರುವ ಮೊದಲು ಎಲ್ಲ ಹಳ್ಳಿಗಳು ಕತ್ತಲಲ್ಲಿದ್ದವು, ತನ್ನ ಆಡಳಿತದಲ್ಲಿ ಅವುಗಳು ಬೆಳಕು ಕಂಡವು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಹಿಂದಕ್ಕೆ ಕಣ್ಣಾಯಿಸಿದರೆ, 1947ರಲ್ಲಿ ಇಡೀ ಭಾರತದಲ್ಲಿ 1,500 ಹಳ್ಳಿಗಳು ವಿದ್ಯುತನ್ನು ಕಂಡಿದ್ದವು. ಇದೂ ಇಡೀ ಹಳ್ಳಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕಂಡಿತು ಎನ್ನುವುದನ್ನು ಹೇಳುವುದಿಲ್ಲ.

ಒಂದು ಹಳ್ಳಿಯಲ್ಲಿ ಒಂದೋ ಎರಡೋ ಮನೆಗಳು ವಿದ್ಯುತ್ ಕಂಡಿದ್ದರೂ ಆ ಹಳ್ಳಿಯನ್ನು ವಿದ್ಯುದೀಕರಣಗೊಂಡ ಹಳ್ಳಿ ಎಂದು ಗುರುತಿಸಲಾಗುತ್ತಿತ್ತು. 2005-2014 ಅಂದರೆ ಯುಪಿಎ ಸರಕಾರದ ಅವಧಿಯಲ್ಲಿ 10, 82,000 ಹಳ್ಳಿಗಳು ವಿದ್ಯುದೀಕರಣಗೊಂಡಿವೆ. ಎರಡು ಕೋಟಿಗೂ ಅಧಿಕ ಮನೆಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ. ಇದರಲ್ಲಿ 19 ಮಿಲಿಯ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇನೆ ಎಂದು ಮೋದಿ ಘೋಷಿಸಿದಾಗ, ವಿದ್ಯುತ್ ಸಂಪರ್ಕವಿಲ್ಲದೆ ಉಳಿದಿದ್ದ ಹಳ್ಳಿಗಳು ಬರೇ 18,452. ಅಂದರೆ ಯುಪಿಎ ಸರಕಾರ ಪ್ರತಿ ವರ್ಷ ಸರಾಸರಿ 12, 030 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರೆ, ಮೋದಿ ಸರಕಾರದ ಪ್ರತಿ ವರ್ಷ ಸರಾಸರಿ 4, 842 ಹಳ್ಳಿಗಳಿಗೆ ಮಾತ್ರ ವಿದ್ಯುತ್ ಪೂರೈಸಿದೆ. ಆದುದರಿಂದ ಹಳ್ಳಿಗಳಿಗೆ ಸಂಪೂರ್ಣ ವಿದ್ಯುತ್ ಎನ್ನುವುದನ್ನು ಮುಂದಿಟ್ಟುಕೊಂಡು ಮೋದಿಯವರು ಸಂಭ್ರಮಿಸುವಂತಹದು ಏನೂ ಇಲ್ಲ. ಅಥವಾ ಉಳಿದ ಸರಕಾರಗಳಿಗೆ ಹೋಲಿಸಿದರೆ ಮೋದಿಯವರದು ನಿಧಾನಗತಿಯ ಅಭಿವೃದ್ಧಿ ಎಂದೇ ಹೇಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಇನ್ನೂ ವಿದ್ಯುತ್ ಸಂಪರ್ಕ ಪೂರ್ತಿಗೊಂಡಿಲ್ಲ. ಈಗಾಗಲೇ ಎನ್‌ಡಿಎ ಸರಕಾರ ಇದಕ್ಕಾಗಿ 16,000 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಹಣವನ್ನು ಮೀಸಲಿಟ್ಟಾಕ್ಷಣ ಯೋಜನೆ ಯಶಸ್ವಿಯಾಗಬೇಕು ಎಂದೇನಿಲ್ಲ. ಬರೀ ಅಂಕಿಸಂಖ್ಯೆಗಳಲ್ಲಿ ಜನರನ್ನು ಮರುಳು ಮಾಡುವ ಬದಲು ಪ್ರಾಮಾಣಿಕವಾಗಿ ಮನೆ ಮನೆಗೆ ಬೆಳಕನ್ನು ಕಲ್ಪಿಸುವ ಕಡೆಗೆ ಸರಕಾರ ಹೆಜ್ಜೆ ಇಡಬೇಕು. ಇಂದು ಇಡೀ ಭಾರತವೇ ವಿದ್ಯುತ್‌ಕೊರತೆಯನ್ನು ಎದುರಿಸುತ್ತಿದೆ. ವಿದ್ಯುತ್ ವಿತರಣಾ ಕಂಪೆನಿಗಳಿಗೆ ಕಲ್ಲಿದ್ದಲು ಸಾಕಷ್ಟು ಪೂರೈಕೆಯಾಗುತ್ತಿಲ್ಲ. ಭಾರತವು ಶೇ. 60ಕ್ಕಿಂತಲೂ ಹೆಚ್ಚು ವಿದ್ಯುತ್‌ಗಾಗಿ ಕಲ್ಲಿದ್ದಲನ್ನೇ ಅವಲಂಬಿಸಿದೆ. ಆದರೆ ಮಗದೊಂದೆಡೆ ಕಲ್ಲಿದ್ದಲು ಉತ್ಪಾದನೆಯೇ ಇಳಿಕೆಯಾಗುತ್ತಿದೆ. ಇದು ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಬರೇ ವಿದ್ಯುತ್ ಸಂಪರ್ಕವನ್ನು ನೀಡಿ ವಿದ್ಯುತ್ತನ್ನೇ ನೀಡದೇ ಇದ್ದರೆ ಅದರಿಂದ ಹಳ್ಳಿಗಳು ಬೆಳಗುತ್ತವೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News