100ಕ್ಕೂ ಅಧಿಕ ಜನರನ್ನು ಬಲಿ ಪಡೆದ ಧೂಳು ಬಿರುಗಾಳಿಗೆ ಕಾರಣವೇನು?

Update: 2018-05-04 06:19 GMT

ಹೊಸದಿಲ್ಲಿ, ಮೇ 4: ಉತ್ತರ ಪ್ರದೇಶ ಹಾಗೂ  ರಾಜಸ್ಥಾನದಲ್ಲಿ ನೂರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡು ಧೂಳು ಮಿಶ್ರಿತ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಗೆ 'ವಿಪರೀತ ಏರಿಕೆಯಾದ ತಾಪಮಾನ, ವಾತಾವರಣದಲ್ಲಿನ ತೇವಾಂಶ ಹಾಗೂ ಅಸ್ಥಿರ  ಹವಾಮಾನವೇ ಕಾರಣ' ಎಂದು  ಹವಾಮಾನ ತಜ್ಞರು ಹೇಳುತ್ತಾರೆ.

ಇದನ್ನೊಂದು ಆಕಸ್ಮಿಕ ಘಟನೆಯೆಂದೇ ಹೇಳಬಹುದು. ಸಾಮಾನ್ಯವಾಗಿ ಧೂಳು ಮಿಶ್ರಿತ ಬಿರುಗಾಳಿ ಇಷ್ಟೊಂದು ತೀವ್ರವಾಗಿರುವುದಿಲ್ಲ ಹಾಗೂ ಹೆಚ್ಚಿನ ಪ್ರದೇಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ವೆದರ್ ಇದರ ಮುಖ್ಯ ಹವಾಮಾನ ತಜ್ಞ ಮಹೇಶ್ ಪಾಲಾವತ್ ಹೇಳುತ್ತಾರೆ.

ಆದರೆ ಹವಾಮಾನ ಬದಲಾವಣೆಯಿಂದಾಗಿ ಇಂತಹ ಇನ್ನಷ್ಟು ಬಿರುಗಾಳಿ ನಿರೀಕ್ಷಿಸಬಹುದೆಂದು ತಜ್ಞರು ಹೇಳುತ್ತಿದ್ದಾರೆ. ವಾಯುವ್ಯ ಭಾರತ ಮುಖ್ಯವಾಗಿ ರಾಜಸ್ಥಾನದಲ್ಲಿನ ವಿಪರೀತ ಉಷ್ಣಾಂಶ, ಹರ್ಯಾಣದಲ್ಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಚಂಡಮಾರುತದ ಪ್ರಭಾವದಿಂದಾಗಿ  ಭೂಮಿಯ ಮೇಲ್ಮೈಗೆ ಪಕ್ಕದಲ್ಲಿದ್ದ ಗಾಳಿ ಮೇಲಕ್ಕೆ ಬೀಸಿದಾಗ ಈ ಪರಿಸ್ಥಿತಿ ಉಂಟಾಗಿತ್ತು.

ಬಂಗಾಳ ಕೊಲ್ಲಿಯಿಂದ ಬೀಸಿದ ಬಲವಾದ ಗಾಳಿ ಹಾಗೂ ವಾಯು ಭಾರ ಕುಸಿತ ಎಲ್ಲಾ ಜತೆಯಾಗಿ ಸೇರಿ ಈ ಸಮಸ್ಯೆಗೆ ಕಾರಣವಾಗಿ ಹಲವಾರು ಜೀವಗಳನ್ನು ಬಲಿ ಪಡೆದುಕೊಂಡಿತ್ತು. ಸಾಮಾನ್ಯವಾಗಿ ತೇವಾಂಶದ ಕೊರತೆಯಿದ್ದಾಗ ಗಾಳಿ ಮೇಲಕ್ಕೆ ಹಾರಿದಾಗ ಅದರಿಂದ ಕೇವಲ ಧೂಳು ಮೇಲೆದ್ದು ಧೂಳುಗಾಳಿಗೆ ಕಾರಣವಾಗುವುದಾದರೆ,  ವಾಯು ಭಾರ ಕುಸಿತದಿಂದಾಗಿ ಮಣ್ಣಿನಲ್ಲಿದ್ದ ತೇವಾಂಶ ಜತೆಗೂಡಿ ಭಾರೀ ಬಿರುಗಾಳಿಗೂ ಕಾರಣವಾಗಿ ಗುಡುಗು ಸಹಿತ ಮಳೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News