ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳೇನು?

Update: 2018-05-04 13:51 GMT

ಬೆಂಗಳೂರು, ಮೇ 4: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷವೂ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಯೋಜನೆ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿರುವ ರೈತರ 1 ಲಕ್ಷದವರೆಗಿನ ಸಾಲಮನ್ನಾ ಸೇರಿದಂತೆ ಹತ್ತು ಹಲವು ಭರವಸೆಗಳನ್ನು ಬಿಜೆಪಿ ನೀಡಿದೆ.

ಶುಕ್ರವಾರ ನಗರದ ಅರಮನೆ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಹೆಸರಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಬಿಡುಗಡೆ ಮಾಡಿದರು. ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ವಲಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಲಾಗಿದೆ.

ರೈತರ ಕಲ್ಯಾಣ: ರೈತರ 1 ಲಕ್ಷದವರೆಗಿನ ಬೆಳೆ ಸಾಲ ಮನ್ನಾ, ನೇಗಿಲಯೋಗಿ ಯೋಜನೆಯಡಿ 20 ಲಕ್ಷ ರೈತರಿಗೆ 10 ಸಾವಿರ ಆರ್ಥಿಕ ನೆರವು, ರೈತಬಂಧು ಆವರ್ತ ನಿಧಿಯಡಿ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ಮೀಸಲು. ಸಿಎಂ ರೈತ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ರೂ.ಗಳವರೆಗೆ ಉಚಿತ ಅಪಘಾತ ವಿಮೆ.

ನೀರಾವರಿ ಯೋಜನೆಗಳು 1.5 ಲಕ್ಷ ಕೋಟಿ ಮೀಸಲು, ರೈತರ ಪಂಪ್ ಸೆಟ್‌ಗೆ 10 ಗಂಟೆ ತ್ರೀ ಫೇಸ್ ವಿದ್ಯುತ್, ರೈತ ಬಂಧು ವಿದ್ಯಾರ್ಥಿ ವೇತನದಡಿ 100 ಕೋಟಿ, ಸಿಎಂ ಕೃಷಿ ಫೆಲೋಶಿಪ್ ಅಡಿ ಸಾವಿರ ರೈತರಿಗೆ ಇಸ್ರೇಲ್, ಚೀನಾ ಪ್ರವಾಸ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 2012ಕ್ಕೆ ಮರುಚಾಲನೆ, ರೈತ ಬಂಧು ಕಚೇರಿ ಸ್ಥಾಪನೆ, ನೀರಾವರಿ ಯೋಜನೆ ಪೂರ್ಣಗೊಳಿಸಲು 1.5ಲಕ್ಷ ಕೋಟಿ ಅನುದಾನ.

ರಾಜಧಾನಿಗೆ: ಬೆಂಗಳೂರಿಗರ ಅಗತ್ಯ ಪೂರೈಸಲು ನವ ಬೆಂಗಳೂರು ಕಾಯ್ದೆ ಹೊಸ ಕಾನೂನು, ನಗರದ ಎಲ್ಲ ಭಾಗಕ್ಕೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ, ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ-ರೈಡ್ ಸ್ಥಾಪನೆ. ಮಹಿಳೆಯರ ತೊಂದರೆಗೆ ಸ್ಪಂದಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ, ಕೆಂಪೇಗೌಡ ನಿಧಿಯಡಿ ಕೆರೆ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕೆ 2500 ಕೋಟಿ ರೂ.

ಮಹಿಳಾ ಸಬಲೀಕರಣ: ಸ್ತ್ರೀ ಉನ್ನತಿ ನಿಧಿಯಡಿ 10 ಸಾವಿರ ಕೋಟಿ ಮೀಸಲು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಶೇ.1 ರ ಬಡ್ಡಿದರದಲ್ಲಿ 2 ಲಕ್ಷ ಸಾಲ ಸೌಲಭ್ಯ, ಹೈನುಗಾರಿಕೆ ಕ್ಷೇತ್ರದಲ್ಲಿ 100 ಕೋಟಿ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸಿಎಂ ಸ್ಮಾರ್ಟ್ ಫೋನ್ ಯೋಜನೆಯಡಿ ಉಚಿತ ಸ್ಮಾರ್ಟ್ ಫೋನ್ ನೀಡಿಕೆ, ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು ವಿದ್ಯಾರ್ಥಿನಿಯರಿಗೆ ಉಚಿತ ಹಾಗು ಉಳಿದವರಿಗೆ 1 ರೂ.ಗೆ ಸ್ಯಾನಿಟರಿ ನ್ಯಾಪ್ ಕಿನ್ ನೀಡಿಕೆ, ಭಾಗ್ಯಲಕ್ಷ್ಮೀ ಯೋಜನೆ ಮೊತ್ತ 3 ಲಕ್ಷಕ್ಕೆ ಹೆಚ್ಚಳ, ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ನಗದು, 3 ಗ್ರಾಂ ಚಿನ್ನದ ತಾಳಿ.

ಯುವಜನತೆಗೆ: ಸಿಎಂ ಲ್ಯಾಪ್‌ಟಾಪ್ ಯೋಜನೆಯಡಿ ಕಾಲೇಜು ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ

ಎಲ್ಲರ ವಿಕಾಸ: 300 ಕ್ಕೂ ಹೆಚ್ಚು ಸಿಎಂ ಅನ್ನಪೂರ್ಣ ಕ್ಯಾಂಟೀನ್ ಆರಂಭ, ಮದಕರಿ ನಾಯಕ ವಸತಿ ಯೋಜನೆಯಡಿ ಎಸ್ಟಿ ಸಮುದಾಯಗಳ ವಸತಿ ನಿರ್ಮಿಸಲು 6,500 ಕೋಟಿ, 8,500 ರೂ. ವೆಚ್ಚದಲ್ಲಿ ಮಾದಾರ ಚನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯದವರಿಗೆ ಆಧುನಿಕ ಮನೆ ನಿರ್ಮಾಣನೇಕಾರರ 1 ಲಕ್ಷ ಸಾಲ ಮನ್ನಾ, ಅಮರಶಿಲ್ಪಿ ಜಕಣಾಚಾರಿ ಜಯಂತಿ, ಜ್ಞಾನ ಆಯೋಗ ಮತ್ತು ಯೋಜನಾ ಮಂಡಳಿ ಬದಲಿಸಿ ಕೀರ್ತಿ ಆಯೋಗ ಸ್ಥಾಪನೆ, ಸಕಾಲ ಕಾಯ್ದೆ ಸರಕಾರದ ಎಲ್ಲಾ ಸೇವೆಗಳಿಗೆ ವಿಸ್ತರಣೆ, ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆ.

ಮರಳು, ಭೂ ಮತ್ತು ಕಾನೂನು ಬಾಹಿರ ಗಣಿಗಾರಿಕೆ ಮಾಫಿಯಾ ಕೊನೆಗೊಳಿಸಲು ಶಾಶ್ವತ ವಿಶೇಷ ಕಾರ್ಯಪಡೆ ರಚನೆ. ಪಿಎಫ್‌ಐ ಕೆಎಫ್‌ಡಿ ಮುಂತಾದ ಗುಂಪು ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸ್ಸು

ಶಿಕ್ಷಣ: ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ, 1300 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ, ಕುವೆಂಪು ಜ್ಞಾನ ಯೋಜನೆಯಡಿ 70 ಹೊಸ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಹಾಗು ಇರುವ ಕಾಲೇಜು ಮೇಲ್ದರ್ಜೆಗೆ 3 ಸಾವಿರ ಕೋಟಿ, ವೃತ್ತಿಪರ ಕೋರ್ಸ್ ಹೊರತುಪಡಿಸಿ ಎಲ್ಲರಿಗೂ ಪದವಿ ಮಟ್ಟದವರೆಗೆ ಸರಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ.

ಆರೋಗ್ಯ: ದೆಹಲಿಯ ಏಮ್ಸ್ ಮಾದರಿ ಎರಡು ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ, ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಡ ದುರ್ಬಲರ ಚಿಕಿತ್ಸೆಗೆ 5 ಲಕ್ಷ ವಿಮೆ. ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಗುರಿ.

ಮೂಲಸೌಕರ್ಯ: ಸೌಭಾಗ್ಯ ಯೋಜನೆಯಡಿ ಮನೆಗಳಿಗೆ ದಿನವಿಡೀ ವಿದ್ಯುತ್, 20 ಸಾವಿರ ಮೆಗಾವ್ಯಾಟ್‌ಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಸೌರಶಕ್ತಿ 4 ಸಾವಿರ ಹೆಚ್ಚುವರಿ ಉತ್ಪಾದನೆ ಕ್ರಮ, 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆ ಸೌಕರ್ಯ.

ಪ್ರಮುಖ ಅಂಶಗಳು
* 1 ಲಕ್ಷವರೆಗಿನ ರೈತರ ಸಾಲಮನ್ನಾ
* ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ನಿಷೇಧ
* ಗೋಹತ್ಯೆ ತಡೆ ಮಸೂದೆ ಜಾರಿ
* ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News