ದೇಶದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿಯೇ ಉದ್ಯೋಗದ ಬಿಕ್ಕಟ್ಟು ಅಡಗಿದೆ: ಯೋಗೇಂದ್ರ ಯಾದವ್

Update: 2018-05-04 12:58 GMT

ಬೆಂಗಳೂರು, ಮೇ 4: ದೇಶದ ಅಭಿವೃದ್ಧಿ ಪರಿಕಲ್ಪನೆಯಲ್ಲಿಯೆ ಉದ್ಯೋಗದ ಬಿಕ್ಕಟ್ಟು ಅಡಗಿದೆ. ಇದನ್ನು ಪರಿಹರಿಸುವಲ್ಲಿ ಎಲ್ಲ ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸ್ವರಾಜ್ ಇಂಡಿಯಾದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಧಾನಸಭಾ ಚುನಾವಣೆ ಕುರಿತು ’ಕರ್ನಾಟಕ ನೌ: ಸೀಝ್ ದ ಮೂಮೆಂಟ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಮೂಲಕಾರಣ ಹುಡುಕಿ, ಪರಿಹರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವ ಕೃಷಿ, ಹೈನುಗಾರಿಕೆ, ಗೃಹ ಕೈಗಾರಿಕೆ, ಮಧ್ಯಮ ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಯುವ ಜನತೆಯನ್ನು ಈ ಕ್ಷೇತ್ರಗಳತ್ತ ಆಕರ್ಷಿಸಲು ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಾಗಿದೆ. ಯಾವುದೆ ಒಂದು ಆಡಳಿತವನ್ನು ದೂರುವುದನ್ನು ನಿಲ್ಲಿಸಿ, ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.

ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ಮಾತನಾಡಿ, ದೇಶದಲ್ಲಿಯೆ ಬೆಂಗಳೂರು ಮಾದರಿ ನಗರವಾಗಿದ್ದು, ಇದೇ ಮಾದರಿಯಲ್ಲಿ ಇತರೆ ನಗರಗಳ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಭಿವೃದ್ಧಿಯು ವಿಕೇಂದ್ರಿಕರಣವಾದಷ್ಟು ದೇಶದ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News