ಭಡ್ತಿ ಮೀಸಲಾತಿ ಕಾಯ್ದೆಗೆ ಕೇಂದ್ರ ಸರಕಾರ ಅಡ್ಡಿ: ನೌಕರರ ಖಂಡನೆ

Update: 2018-05-04 13:19 GMT

ಬೆಂಗಳೂರು, ಮೇ 4: ರಾಜ್ಯದ ಪರಿಶಿಷ್ಟ ಜಾತಿ ಮತ್ತು ವರ್ಗದ ಸರಕಾರಿ ನೌಕರರಿಗೆ ಭಡ್ತಿ ನೀಡುವುದಕ್ಕೆ ಕೇಂದ್ರ ಸರಕಾರ ಅಡ್ಡಿಪಡಿಸಿ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ, ಭಡ್ತಿ ಹೊಂದಬೇಕಾದವರು ಹಿಂಭಡ್ತಿ ಹೊಂದಿದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಎಇಇಯಾಗಿ ಕೆಲಸ ನಿರ್ವಹಿಸುತ್ತಿದ್ದ ಲಿಂಗರಾಜು ಹೃದಯಾಘಾತದಿಂದ ಮೃತಪಟ್ಟರೆ, ಮುಂಡಗೋಡದಲ್ಲಿ ರಾಜಸ್ವ ನಿರೀಕ್ಷಕರಾಗಿದ್ದ ಜಗದೀಶ್ ಛಲವಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಕೇಂದ್ರ ಸರಕಾರದ ತಾರತಮ್ಯ ಧೋರಣೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಬಿಲ್‌ಗೆ ಅನುಮೋದನೆ ನೀಡದೆ ರಾಷ್ಟ್ರಪತಿಗಳಿಗೆ ರವಾನಿಸಿದ್ದು, ಕೇಂದ್ರ ಸರಕಾರದ ಕೆಲವು ಇಲಾಖೆಗಳಿಂದ ಅನಾವಶ್ಯಕವಾಗಿ ಸ್ಪಷ್ಟೀಕರಣ ನೀಡುವಂತೆ ಕೇಳುವ ಕೇಂದ್ರ ಸರಕಾರ ರಾಷ್ಟ್ರಪತಿಗಳು ಅಂಕಿತ ನೀಡದಂತೆ ಹುನ್ನಾರ ನಡೆಸಿತು. ಯೋಜನಾ ಇಲಾಖೆ ಮತ್ತು ನಿರ್ದೇಶಕರು ಭಡ್ತಿ ಮೀಸಲಾತಿ ರದ್ದುಪಡಿಸಿ ಪುನಃ ಜೇಷ್ಠತಾ ಪಟ್ಟಿಯನ್ನು ಚಾಲ್ತಿ ಆದೇಶಗಳಿಗೆ ವಿರುದ್ಧವಾಗಿ ಪ್ರಕಟಿಸಿ ಕೇವಲ ಒಂದು ದಿನ ಕಾಲಾವಕಾಶ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದರು. ಆದರೆ, ಸಲ್ಲಿಸಿರುವ ಆಕ್ಷೇಪಣೆ ಪರಿಗಣಿಸದೆ ಉದ್ದೇಶಪೂರ್ವಕವಾಗಿ ಹಿಂಭಡ್ತಿ ನೀಡಲು ಕಾರಣಕರ್ತರಾಗಿದ್ದಾರೆ ಎಂದು ದೂರಿದರು.

ಕೇಂದ್ರದ ದಲಿತ ವಿರೋಧಿ ನೀತಿಯಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರು ಮಾನಸಿಕವಾಗಿ ನೊಂದು ಸಾವಿನ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಸಮುದಾಯದ 9 ಮಂದಿ ನೌಕರರು ಸಾವನ್ನಪ್ಪಿದ್ದರೂ ಕೇಂದ್ರ ಸರಕಾರಕ್ಕೆ ತೃಪ್ತಿಯಾದಂತೆ ಕಾಣಿಸುತ್ತಿಲ್ಲ. ಅಲ್ಲದೆ ಸರಕಾರದ ಕೆಲ ಅಧಿಕಾರಿಗಳ ಉದ್ದೇಶಪೂರ್ವಕ ಜೇಷ್ಠತಾ ಪಟ್ಟಿ ನೌಕರರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ. ಇದು ಹೀಗೇ ಮುಂದುವರೆದರೆ ರಾಜ್ಯ ಸಂಸದರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News