ದೆವ್ವ ಹಿಡಿದಿದೆ ಎಂದು ಬಾಲಕಿಯನ್ನು ಬಡಿದು ಕೊಂದ ತಾಯಿ- ಮಗಳು

Update: 2018-05-05 05:49 GMT

ಬೆಂಗಳೂರು, ಮೇ 5: ಬಾಲಕಿಯೊಬ್ಬಳಿಗೆ ಹಿಡಿದ 'ದೆವ್ವ' ಬಿಡಿಸುವ ಸಲುವಾಗಿ ಆಕೆಯನ್ನು ಕಬ್ಬಿಣದ ಪೈಪ್‌ನಿಂದ ಹೊಡೆದು ಸಾವಿಗೆ ಕಾರಣರಾದ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಮಗಳನ್ನು ಬಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

13 ವರ್ಷದ ಬಾಲಕಿಗೆ ದೆವ್ವ ಹಿಡಿದಿದೆ ಎಂಬ ಅನುಮಾನದಿಂದ ದೆವ್ವ ಬಿಡಿಸುವ ಸಲುವಾಗಿ 40ರ ಮಹಿಳೆ ಹಾಗೂ ಆಕೆಯ ಮಗಳು (20) ಕಬ್ಬಿಣದ ಪೈಪ್‌ನಿಂದ ಬಾಲಕಿಯನ್ನು ಹೊಡೆದರು. ತೀವ್ರ ಗಾಯಗೊಂಡ ಬಾಲಕಿ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ.

ಬೈಪನಳ್ಳಿ ಸಮೀಪದ ವಿಜ್ಞಾನ ನಗರದ ಪ್ರಮೀಳಾ ಸಗಾಯಂ ಹಾಗೂ ಆಕೆಯ ಮಗಳು ಎಸ್.ರಮ್ಯಾ ಬಂಧಿತರು. ನಾಲ್ಕು ತಿಂಗಳ ಹಿಂದೆ ಕೂಡಾ ಬಾಲಕಿಗೆ ದೆವ್ವ ಹಿಡಿದಿದೆ ಎಂಬ ಅನುಮಾನದಿಂದ ಅಮಾನುಷವಾಗಿ ಥಳಿಸಿದ್ದರು ಎಂದು ಮೃತ ಬಾಲಕಿಯ ತಾಯಿ ಗಾಯತ್ರಿ (41) ದೂರು ನೀಡಿದ್ದಾರೆ.

ತನ್ನ ಮಗಳು ಟೆಲಿವಿಷನ್ ಹಾಗೂ ಮೊಬೈಲ್ ಚಟಕ್ಕೆ ಬಿದ್ದಿದ್ದಾಳೆ ಎಂದು ಪ್ರಮೀಳಾ ಬಳಿ ಗಾಯತ್ರಿ ಹೇಳಿಕೊಂಡಿದ್ದರು. ಆಗ "ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಈ ಕಾರಣದಿಂದ ಇಂಥ ಚಟಕ್ಕೆ ಬಲಿಬಿದ್ದಿದ್ದಾಳೆ" ಎಂದು ಪ್ರಮೀಳಾ ಹೇಳಿದ್ದು, ಮಗಳಿಗೆ ಹಿಡಿದ ದೆವ್ವವನ್ನು ಬಿಡಿಸುವುದಾಗಿ ಗಾಯತ್ರಿಯನ್ನು ಪ್ರಮೀಳಾ ನಂಬಿಸಿದ್ದಳು. ಮಗಳನ್ನು ಶುದ್ಧ ಮಾಡುವ ಸಲುವಾಗಿ ಸ್ವತಃ ತಾಯಿಯೇ ಪ್ರಮೀಳಾ ಬಳಿ ಬಾಲಕಿಯನ್ನು ಬಿಟ್ಟು ಬಂದಿದ್ದಳು. ದುಷ್ಟಶಕ್ತಿಯನ್ನು ಉಚ್ಚಾಟಿಸುವ ಸಲುವಾಗಿ ಕಬ್ಬಿಣದ ಪೈಪ್‌ನಿಂದ ಪ್ರಮೀಳಾ ಹಾಗೂ ರಮ್ಯಾ ಹೊಡೆದರು. ಪ್ರಜ್ಞೆ ತಪ್ಪಿ ಬಿದ್ದ ಬಾಲಕಿ ಅಲ್ಲೇ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಮಹಿಳೆ, ಈ ಘಟನೆಯನ್ನು ಯಾರ ಬಳಿಯೂ ಹೇಳದಂತೆ ತಾಯಿಗೆ ಎಚ್ಚರಿಕೆ ನೀಡಿದಳು. ಕೊನೆಗೆ ಪೊಲೀಸರ ಬಳಿ ತೆರಳಿ ಗಾಯತ್ರಿ ತನ್ನ ಮಗಳನ್ನು ಕೊಂದಿದ್ದಾಳೆ ಎಂದು ದೂರು ನೀಡಿದಳು. ಆದರೆ ದೇಹದ ಮೇಲಿದ್ದ ಗಾಯದ ಗುರುತಿಗೂ ಗಾಯತ್ರಿಯ ತಪ್ಪೊಪ್ಪಿಗೆ ಹೇಳಿಕೆಗೂ ಹೋಲಿಕೆಯಾಗದ ಹಿನ್ನೆಲೆಯಲ್ಲಿ ದೂರು ನೀಡಿದ ಮಹಿಳೆಯನ್ನೇ ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗವಾಯಿತು.

ಬಾಲಕಿ ಸದಾ ಟಿವಿ ನೋಡುತ್ತಿದ್ದುದರಿಂದ ಕೋಪಗೊಂಡ ಗಾಯತ್ರಿ ಕಬ್ಬಿಣದ ಪೈಪ್‌ನಿಂದ ಹೊಡೆದು ಮಗಳನ್ನು ಕೊಂದಿದ್ದಾಳೆ ಎಂದು ಹೇಳುವ ಮೂಲಕ ಆರೋಪಿ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News