ರಾಹುಲ್ ಗಾಂಧಿ ವಿರುದ್ಧ ಚುನಾವಣಾಧಿಕಾರಿಗೆ ದೂರು

Update: 2018-05-05 12:10 GMT

ಬೆಂಗಳೂರು, ಮೇ 5: ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದಲ್ಲದೆ, ಸಂಘಪರಿವಾರದವರನ್ನು ಕಳ್ಳರೆಂದು ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

ಕಲಬುರಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಪಿಯೂಷ್ ಗೋಯಲ್ ಮತ್ತು ಅಮಿತ್ ಶಾ ಪುತ್ರ ಜೈಶಾ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇವೆಲ್ಲಾ ವೈಯಕ್ತಿಕ ಆಪಾದನೆಗಳಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಸಾರ್ವಜನಿಕರ ಹಣ ಕಿತ್ತು ಬಿಜೆಪಿಯವರು ನೀರವ್ ಮೋದಿಯಂಥವರಿಗೆ ನೀಡುತ್ತಾರೆ ಎಂದು ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿ, ಕೇಂದ್ರದ ಜನಪ್ರಿಯ ಯೋಜನೆಯಾದ ಬೇಟಿ ಪಡಾವೋ ಬೇಟಿ ಬಚಾವೋವನ್ನು ಟೀಕಿಸುತ್ತಾ, ಬಿಜೆಪಿ ಶಾಸಕರಿಂದ ಬೇಟಿ ಬಚಾವೋ ಎಂದು ಅಸಹ್ಯವಾಗಿ ವ್ಯಂಗ್ಯವಾಡಿದ್ದಾರೆ ಎಂದು ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ದೇಶದಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುವ ಮೂಲಕ ದ್ವೇಷ ಭಾವನೆ ಹರಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಸರಕಾರ ನಡೆಸಲಿದೆ ಎಂದು ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡದಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News