ಬೇಂದ್ರೆ ಕಾವ್ಯ ನೈತಿಕ ಮೌಲ್ಯದ ಭುನಾದಿ: ಡಾ.ಜಿ.ಕೃಷ್ಣಪ್ಪ

Update: 2018-05-05 12:30 GMT

ಬೆಂಗಳೂರು, ಮೇ 5: ಬೇಂದ್ರೆ ಕಾವ್ಯವನ್ನು ಓದುತ್ತಾ, ಅರ್ಥೈಸಿಕೊಳ್ಳುತ್ತಾ ಹೋದಂತೆ ನಮ್ಮೊಳಗೆ ನೈತಿಕ ಮೌಲ್ಯಗಳು ಬೇರು ಬೀಡುತ್ತವೆ ಎಂದು ಹಿರಿಯ ವಿಮರ್ಶಕ ಡಾ.ಜಿ.ಕೃಷ್ಣಪ್ಪ ತಿಳಿಸಿದರು.

ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಗರದ ಡಾ.ಎಚ್ಚೆನ್ ಸಭಾಂಗಣದಲ್ಲಿ ಆಯೋಜಿಸಿದ್ದ ನವೋದಯ ಸಾಹಿತ್ಯ ಚಳವಳಿಗಳು ಮತ್ತು ಬೇಂದ್ರೆ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವ್ಯಗಳ ಅರ್ಥವನ್ನು ತಿಳಿಯುತ್ತಾ ಹೋದಂತೆ ನೈತಿಕ ಮೌಲ್ಯಗಳ ಮಹತ್ವ ನಮ್ಮ ಅರಿವಿಗೆ ಬರುತ್ತವೆ ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆಯವರು ಕಾವ್ಯ ವೈಜ್ಞಾನಿಕ ಸತ್ಯವನ್ನು, ನೆಲದ ಬದುಕಿನ ಸತ್ಯ ಹಾಗೂ ಜೀವನ ಮೌಲ್ಯಗಳನ್ನು ಹೇಳಿಕೊಡುತ್ತದೆಯೆ ವಿನಃ ಸತ್ಯವಲ್ಲದ ಒಂದು ಸಾಲನ್ನು ಅವರು ಬರೆದಿಲ್ಲ. ಹೀಗಾಗಿ ಅವರ ಕಾವ್ಯಗಳು ಸದಾ ಪ್ರಸ್ತುತವಾಗಿರುವಂತಹದ್ದೆಂದು ಅವರು ಅಭಿಪ್ರಾಯಿಸಿದರು.

ಬಾಲ್ಯಾವಸ್ಥೆಯಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವುದು ಅಗತ್ಯವಿದೆ. ಅದು ಕಾವ್ಯ-ಸಾಹಿತ್ಯದ ಪರಿಚಯ, ಅದರ ಮಹತ್ವವನ್ನು ಅರಿಯುವಂತೆ ಪ್ರೇರೇಪಿಸಬೇಕಾಗಿದೆ. ಇದಕ್ಕೆ ದ.ರಾ.ಬೇಂದ್ರೆ ಸೇರಿದಂತೆ ನವೋದಯ ಸಾಹಿತಿಗಳ ಕಾವ್ಯಗಳನ್ನು ಓದಿ ಅದನ್ನು ಅರಿಯಬೇಕು. ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಸಾಕಷ್ಟು ಕಡಿಮೆ ಆಗಲಿದೆ ಎಂದು ಅವರು ಹೇಳಿದರು.

ಯುವ ಕವಿಗಳು ಕಾವ್ಯವನ್ನು ರಚಿಸಬೇಕಾದರೆ, ದ.ರಾ.ಬೇಂದ್ರೆಯವರ ಬದುಕನ್ನು ಅರಿಯಬೇಕು. ಹಾಗೂ ಅವರ ಕಾವ್ಯಗಳು ಅಧ್ಯಯನ ಮಾಡಬೇಕು. ದ.ರಾ.ಬೇಂದ್ರೆ ಬಾಲ್ಯಾವಸ್ಥೆಯಲ್ಲಿಯೆ ಜಾತಿ, ಮತಗಳ ಚೌಕಟ್ಟನ್ನು ಮೀರಿ, ಬೀದಿಯಲ್ಲಿ ಬೆಳೆದವರು. ಪ್ರಕೃತಿಯ ಸೊಬಗಿನಲ್ಲಿ ಮಿಂದೆದ್ದವರು. ಹೀಗಾಗಿ ಅವರ ಕಾವ್ಯ ಪ್ರಕೃತಿಯಂತೆಯೆ ಸ್ವಚ್ಛಂದವಾಗಿದೆ, ನಿಷ್ಕಲ್ಮಶವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News