ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ, ಅಶಕ್ತರ ಪರವಾಗಿ ಉತ್ತಮ ಕೆಲಸ ಮಾಡಿದೆ: ಉಮ್ಮನ್ ಚಾಂಡಿ

Update: 2018-05-05 14:25 GMT

ಬೆಂಗಳೂರು, ಮೇ 5: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಬಡವರು, ಅಶಕ್ತರ ಪರವಾಗಿ ಉತ್ತಮ ಕೆಲಸವನ್ನು ಮಾಡಿದೆ. ಆದರೆ, ಪ್ರಧಾನಿ ನರೇಂದ್ರಮೋದಿ ಅದನ್ನು ಸಹಿಸದೆ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಕೆ.ಆರ್.ಪುರದಲ್ಲಿ ಐಟಿಐ ಆಫೀಸರ್ಸ್‌ ಕ್ಲಬ್‌ನಲ್ಲಿ ಕೇರಳ ಸಮಾಜದವರು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಬಿ.ಎ.ಬಸವರಾಜ ಪರ ಮತಯಾಚಿಸಿ ಅವರು ಮಾತನಾಡಿದರು.

1.82 ಲಕ್ಷ ಕೋಟಿ ರೂ.ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಆಕರ್ಷಿಸುವ ಮೂಲಕ ಕರ್ನಾಟಕವು ಇಡೀ ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ಗುಜರಾತ್ 54 ಸಾವಿರ ಕೋಟಿ ರೂ., ಮಹಾರಾಷ್ಟ್ರ 44 ಸಾವಿರ ಕೋಟಿ ರೂ., ಆಂಧ್ರಪ್ರದೇಶ 35 ಸಾವಿರ ಕೋಟಿ ರೂ.ಗಳನ್ನು ಆಕರ್ಷಿಸುವ ಮೂಲಕ ನಂತರದ ಸ್ಥಾನದಲ್ಲಿವೆ. ಇದು ನಮ್ಮ ಪ್ರಧಾನಿಗೆ ಕಾಣಿಸುವುದಿಲ್ಲವೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿವೆ. ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಇಡೀ ದೇಶವೆ ಬೆಂಗಳೂರಿನ ಬಗ್ಗೆ ಹೆಮ್ಮೆ ಪಡುವಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಉಮ್ಮನ್ ಚಾಂಡಿ ಹೇಳಿದರು.

ನರೇಂದ್ರಮೋದಿ ದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ವಿದೇಶದಿಂದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಹೇಳಿದರು. ಆದರೆ, ಒಂದು ಪೈಸೆಯೂ ಬಂದಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ ಭರವಸೆಯು ಹುಸಿಯಾಯಿತು. ಅದರ ಬದಲು ನೋಟು ಅಮಾನ್ಯ, ಜಿಎಸ್‌ಟಿ ಜಾರಿ ಮಾಡಿ ಜನರನ್ನು ಹೈರಾಣಾಗಿಸಿದರು ಎಂದು ಅವರು ಆರೋಪಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಇಳಿಸಲಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲ ಬ್ಯಾರೆಲ್ ಒಂದಕ್ಕೆ 135 ಡಾಲರ್‌ನಷ್ಟಿತ್ತು. ಆದರೆ, ಈಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಜನರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಅವರು ದೂರಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಬೇಕು, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ನ ಗೆಲುವಿನ ಓಟ ಕರ್ನಾಟಕದಿಂದಲೆ ಆರಂಭವಾಗಬೇಕು. ಆನಂತರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿಯೂ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಉಮ್ಮನ್ ಚಾಂಡಿ ವಿಶ್ವಾಸ ವ್ಯಕ್ತಪಡಿಸಿದರು.

ಜನರಲ್ ತಿಮ್ಮಯ್ಯ, ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು, ಕೇಂದ್ರದ ರಕ್ಷಣಾ ಸಚಿವರಾಗಿದ್ದ ಕೃಷ್ಣಾ ಮೆನನ್‌ರನ್ನು ನರೇಂದ್ರಮೋದಿ ಅವಮಾನಿಸಿದ್ದಾರೆ. ಇತಿಹಾಸವೇ ಗೊತ್ತಿಲ್ಲದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ವರ್ಷಕ್ಕೆ ಒಬ್ಬ ಮುಖ್ಯಮಂತ್ರಿಯಂತೆ ಮೂವರು ಮುಖ್ಯಮಂತ್ರಿಗಳು ಬದಲಾದರು. ಆದರೆ, ಕಾಂಗ್ರೆಸ್‌ನಲ್ಲಿ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಮರ್ಥ, ಸುಸ್ಥಿರ ಸರಕಾರವನ್ನು ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಗುಣಮಟ್ಟದ, ರುಚಿಯಾದ ಆಹಾರವನ್ನು ಅತ್ಯಂತ ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ. ನಾನು ಐದು ರೂ.ಗಳನ್ನು ಪಾವತಿಸಿ ಮೂರು ಇಡ್ಲಿಗಳನ್ನು ಸೇವಿಸಿದೆ. ಬಡವರ ಹಸಿವನ್ನು ಅರಿತವರೆ ಇಂತಹ ಯೋಜನೆ ಜಾರಿಗೆ ತರಲು ಸಾಧ್ಯ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಬಸವರಾಜ ಕಳೆದ ಐದು ವರ್ಷಗಳಲ್ಲಿ 1300 ಕೋಟಿ ರೂ.ಗಳ ಅನುದಾನವನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಆದರೆ, ನಾನೇ ಇಷ್ಟು ಪ್ರಮಾಣದ ಅನುದಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕಲೆಯನ್ನು ನಮಗೂ ಹೇಳಿಕೊಡಿ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಬಿ.ಎ.ಬಸವರಾಜ, ಸಂಸದ ಆ್ಯಂಡ್ರೋ ಅಂತೋಣಿ, ಮಾಜಿ ಶಾಸಕ ಐವಾನ್ ನಿಂಗ್ಲಿ, ಮುಖಂಡರಾದ ದಿವಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News