ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಸಚಿವನ ಬೆಂಗಾವಲು ಪಡೆಯ ಮೇಲೆ ದಾಳಿ

Update: 2018-05-05 15:01 GMT

ಶ್ರೀನಗರ, ಮೇ.5: ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಸ್ಥಳೀಯರು ಜಮ್ಮು ಮತ್ತು ಕಾಶ್ಮೀರ ಸಚಿವ ಶಾಮ್ ಲಾಲ್ ಚೌಧುರಿಯ ಬೆಂಗಾವಲು ಪಡೆಯ ಮೇಲೆ ಕಲ್ಲುಗಳನ್ನು ಎಸೆದು ದಾಳಿ ಮಾಡಿದ ಘಟನೆ ಶನಿವಾರ ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ನಡೆದಿದೆ.

ಸಚಿವರ ಬೆಂಗಾವಲು ವಾಹನ ಹೆದ್ದಾರಿಯಲ್ಲಿ ಸಾಗದಂತೆ ತಡೆಯಲು ಸ್ಥಳೀಯರು ರಸ್ತೆತಡೆ ನಡೆಸಿದ್ದರು. ಆದರೆ ಬೆಂಗಾವಲು ವಾಹನ ನಿಲ್ಲದೆ ಸಾಗಿದಾಗ ಆಕ್ರೋಶಗೊಂಡ ಜನರು ವಾಹನದ ಮೇಲೆ ಕಲ್ಲೆಸೆದಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಕಥುವಾ ಜಿಲ್ಲೆಯ ರಸನಾ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ದೇಶಾದ್ಯಂತ ಆಕ್ರೋಶದ ಅಲೆಯನ್ನು ಸೃಷ್ಟಿಸಿತ್ತು. ಮೃತ ಬಾಲಕಿಯ ಕುಟುಂಬಸ್ಥರು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದ್ದರು. ಸದ್ಯ ಈ ಪ್ರಕರಣದ ತನಿಖೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಕ್ರೈಂಬ್ರಾಂಚ್ ವಿಭಾಗ ನಡೆಸುತ್ತಿದೆ. ಕ್ರೈಂ ಬ್ರಾಂಚ್ ಈಗಾಗಲೇ ಎಂಟು ಆರೋಪಿಗಳ ವಿರುದ್ಧ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸಿಬಿಐ ತನಿಖೆಯ ಆಗ್ರಹಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಮೆಹಬೂಬ ಮುಫ್ತಿ ಸರಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ಚೌಧುರಿ ಲಾಲ್ ಸಿಂಗ್ ಮತ್ತು ಚಂದ್ರ ಪ್ರಕಾಶ್ ಗಂಗಾ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಯಿತು. ಪ್ರಕರಣ ಪ್ರಮುಖ ಆರೋಪಿ ಸಾಂಜಿ ರಾಮ್, ತಾನು ಮುಗ್ಧನಾಗಿದ್ದು ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ.

ಅಲೆಮಾರಿ ಸಮುದಾಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜಕೀಯ ಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಪರಿಣಾಮವಾಗಿ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತಂದ ಸರಕಾರ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ನಿಬಂಧನೆಯನ್ನು ಈ ಕಾಯ್ದೆಗೆ ಸೇರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News